ಮೈನ್ಮಾರ್ ನಲ್ಲಿನ ಬಂಡುಕೋರ ಉಲ್ಫಾ-ಐ ಸಂಘಟನೆಯ ಮೇಲೆ ಡ್ರೋನ್ ದಾಳಿ ಆರೋಪ: ಅಲ್ಲಗಳೆದ ಭಾರತೀಯ ಸೇನೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಮೈನ್ಮಾರ್ ನಲ್ಲಿನ ನಿಷೇಧಿತ ಬಂಡುಕೋರ ಉಲ್ಫಾ-ಐ ಸಂಘಟನೆಯ ಪೂರ್ವ ಮುಖ್ಯ ಕಚೇರಿಯ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ ಎಂಬ ಆರೋಪಗಳನ್ನು ಭಾರತೀಯ ಸೇನೆ ಅಲ್ಲಗಳೆದಿದೆ.
ಇದಕ್ಕೂ ಮುನ್ನ, ಮೈನ್ಮಾರ್ ನಲ್ಲಿನ ತನ್ನ ಪೂರ್ವ ಮುಖ್ಯ ಕಚೇರಿಯ ಮೇಲೆ ರವಿವಾರ ನಸುಕಿನಲ್ಲಿ ಭಾರತೀಯ ಸೇನೆ ಡ್ರೋನ್ ದಾಳಿ ನಡೆಸಿದೆ ಎಂದು ರವಿವಾರ ನಿಷೇಧಿತ ಉಲ್ಫಾ-ಐ ಸಂಘಟನೆ ಆರೋಪಿಸಿತ್ತು.
ಈ ಕುರಿತು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದ್ದ ಉಲ್ಫಾ-ಐ, ಗಡಿಯಾಚೆಯಿಂದ ಡ್ರೋನ್ ದಾಳಿ ನಡೆಸಲಾಗಿದ್ದು, ಈ ದಾಳಿಯಲ್ಲಿ ತನ್ನ ಸಂಘಟನೆಯ 19 ಸದಸ್ಯರು ಮೃತಪಟ್ಟು, 19 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ.
ವರದಿಗಳ ಪ್ರಕಾರ, ಡ್ರೋನ್ ದಾಳಿಯಲ್ಲಿ ಉಲ್ಫಾ-ಐ ಸಂಘಟನೆಯ ಕಮಾಂಡರ್ ನಯನ್ ಮೇಧಿ ಹತ್ಯೆಗೀಡಾಗಿದ್ದು, ರೆವಲ್ಯೂಷನರಿ ಪೀಪಲ್ಸ್ ಫ್ರಂಟ್ ನ ಕೆಲವು ಸದಸ್ಯರೂ ಸೇರಿದಂತೆ ಮಣಿಪುರದ ಕೆಲವು ಬಂಡುಕೋರ ಸಂಘಟನೆಗಳ ಸದಸ್ಯರು ಹತರಾಗಿದ್ದಾರೆ ಎಂದು ಹೇಳಲಾಗಿದೆ. ಉಲ್ಫಾ-ಐ ಸಂಘಟನೆಯ ಶಿಬಿರದಲ್ಲಿ ಉಪಸ್ಥಿತರಿದ್ದ ರೆವಲ್ಯೂಷನರಿ ಪೀಪಲ್ಸ್ ಫ್ರಂಟ್ ನ ಸದಸ್ಯರು ಮಣಿಪುರದ ಪೀಪಲ್ಸ್ ಲಿಬರೇಷನ್ ಆರ್ಮಿಯ ರಾಜಕೀಯ ಘಟಕದ ಸದಸ್ಯರು ಎಂದು ಹೇಳಲಾಗಿದ್ದು, ಅವರಲ್ಲೂ ಕೆಲವರು ಮೃತಪಟ್ಟಿದ್ದರೆ, ಮತ್ತೆ ಕೆಲವರು ಗಾಯಗೊಂಡಿದ್ದಾರೆ.
ಆದರೆ, ಈ ಕುರಿತು ಅಧಿಕೃತ ಪ್ರಕಟನೆ ಬಿಡುಗಡೆ ಮಾಡಿರುವ ಭಾರತೀಯ ಸೇನೆ, ಈ ಆರೋಪಗಳನ್ನು ಅಲ್ಲಗಳೆದಿದೆ.
“ಇಂತಹ ಕಾರ್ಯಾಚರಣೆಯ ಬಗ್ಗೆ ಭಾರತೀಯ ಸೇನೆಗೆ ಯಾವುದೇ ಮಾಹಿತಿ ಇಲ್ಲ” ಎಂದು ಗುವಾಹಟಿ ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ಸ್ಪಷ್ಟಪಡಿಸಿದ್ದಾರೆ.







