ಟೋಲ್ ಪ್ಲಾಝಾದಲ್ಲಿ ಸೇನಾ ಯೋಧನ ಮೇಲೆ ಹಲ್ಲೆ: ಕಂಪೆನಿಗೆ 20 ಲಕ್ಷ ರೂ. ದಂಡ ವಿಧಿಸಿ, ನಿಷೇಧ ಹೇರಿದ NHAI

ಸಾಂದರ್ಭಿಕ ಚಿತ್ರ | PC : NDTV
ಲಕ್ನೊ: ತಮ್ಮ ಸ್ವಗ್ರಾಮದಲ್ಲಿ ರಜಾದಿನ ಕಳೆದ ನಂತರ, ಶ್ರೀನಗರದಲ್ಲಿ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದ ಸೇನಾ ಯೋಧರೊಬ್ಬರ ಮೇಲೆ ಟೋಲ್ ಪ್ಲಾಝಾ ಸಿಬ್ಬಂದಿಗಳು ಭೀಕರ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಭುನಿಯಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಸೇನಾ ಯೋಧ ಕಪಿಲ್ ಎಂಬುವವರು ಶ್ರೀನಗರಕ್ಕೆ ತೆರಳಲು ದಿಲ್ಲಿಯಿಂದ ವಿಮಾನವೇರಲು ರವಿವಾರ ತೆರಳುತ್ತಿದ್ದರು. ಈ ವೇಳೆ ಟೋಲ್ ಪ್ಲಾಝಾ ಸಿಬ್ಬಂದಿಗಳು ಅವರಿಂದ ಟೋಲ್ ಶುಲ್ಕ ಪಾವತಿಗೆ ಆಗ್ರಹಿಸಿದ್ದಾರೆ. ಆಗ ತಮ್ಮ ಗುರುತಿನ ಚೀಟಿಯನ್ನು ಪ್ರದರ್ಶಿಸಿರುವ ಕಪಿಲ್, ನನಗೆ ಟೋಲ್ ಶುಲ್ಕ ನೀಡದೆ ಪ್ರಯಾಣ ಬೆಳೆಸಲು ಪರವಾನಗಿ ಇದೆ ಎಂದು ಟೋಲ್ ಪ್ಲಾಝಾ ಸಿಬ್ಬಂದಿಗಳ ಬಳಿ ವಾದಿಸಿದ್ದಾರೆ. ಈ ವೇಳೆ ಟೋಲ್ ಪ್ಲಾಝಾ ಸಿಬ್ಬಂದಿಗಳು ಹಾಗೂ ಸೇನಾ ಯೋಧ ಕಪಿಲ್ ನಡುವೆ ಘರ್ಷಣೆ ಪ್ರಾರಂಭವಾಗಿದೆ ಎಂದು ಹೇಳಲಾಗಿದೆ.
ನಾನು ಟೋಲ್ ಪ್ಲಾಝಾ ಸಿಬ್ಬಂದಿಗಳ ಬೇಡಿಕೆಯನ್ನು ಪ್ರತಿಭಟಿಸಿದಾಗ, ನನ್ನ ಗುರುತಿನ ಚೀಟಿ ಹಾಗೂ ಮೊಬೈಲ್ ಅನ್ನು ಕಿತ್ತುಕೊಂಡು ನನ್ನ ಮೇಲೆ ಅವರು ಭೀಕರವಾಗಿ ಹಲ್ಲೆ ನಡೆಸಿದರು ಎಂದು ಕಪಿಲ್ ಆರೋಪಿಸಿದ್ದಾರೆ. ಘಟನೆಯ ವಿಡಿಯೊ ವೈರಲ್ ಆಗಿದ್ದು, ಈ ವಿಡಿಯೊದಲ್ಲಿ ಟೋಲ್ ಪ್ಲಾಝಾ ಸಿಬ್ಬಂದಿಗಳು ಸೇನಾ ಯೋಧ ಕಪಿಲ್ ರನ್ನು ಭೀಕರವಾಗಿ ಥಳಿಸುತ್ತಿರುವುದು ಸೆರೆಯಾಗಿದೆ. ಈ ಘಟನೆ ನಡೆದಾಗ, ಕಪಿಲ್ ಅವರ ಸೋದರ ಸಂಬಂಧಿ ಶಿವಂ ಹಾಗೂ ಅವರ ತಂದೆ ಕೃಷ್ಣ ಪಾಲ್ ಕೂಡಾ ಜೊತೆಯಲ್ಲಿದ್ದರು ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕೃಷ್ಣ ಪಾಲ್, “ವಾಹನಗಳ ಉದ್ದನೆಯ ಸರತಿ ಸಾಲಿದ್ದು, ನಾನು ವಿಮಾನದಲ್ಲಿ ತೆರಳಬೇಕಿರುವುದರಿಂದ, ನನಗೆ ಶೀಘ್ರವಾಗಿ ತೆರಳಲು ಅವಕಾಶ ನೀಡಿ ಎಂದು ಟೋಲ್ ಪ್ಲಾಝಾ ಸಿಬ್ಬಂದಿಗಳ ಬಳಿ ಕಪಿಲ್ ಮನವಿ ಮಾಡಿದರು” ಎಂದು ತಿಳಿಸಿದ್ದಾರೆ. “ನೀನೇನು ನ್ಯಾಯಾಧೀಶನೆ?” ಎಂದು ಪ್ರಶ್ನಿಸಿದ ಟೋಲ್ ಪ್ಲಾಝಾ ಸಿಬ್ಬಂದಿಯೊಬ್ಬ, ಕಪಿಲ್ ರ ಗುರುತಿನ ಚೀಟಿಯನ್ನು ನೆಲದ ಮೇಲೆ ಬಿಸಾಡಿದ” ಎಂದೂ ಅವರು ಆರೋಪಿಸಿದ್ದಾರೆ.
ನನ್ನ ಪುತ್ರ ಕಪಿಲ್ ಗೆ ಸಲಾಕೆಗಳು, ದೊಣ್ಣೆಗಳಿಂದ ಥಳಿಸಲಾಯಿತು ಹಾಗೂ ಎಂಟರಿಂದ ಹತ್ತು ಮಂದಿ ಆತನಿಗೆ ಒದ್ದರು. ಕೆಲವರು ಆತ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗದಂತೆ ಆತನ ಕೈಗಳನ್ನು ಹಿಡಿದುಕೊಂಡರು ಎಂದು ಕೃಷ್ಣ ಪಾಲ್ ಅಲವತ್ತುಕೊಂಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದು, ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
ಇದರ ಬೆನ್ನಿಗೇ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ, ಟೋಲ್ ಸಂಗ್ರಹಿಸುವ ಕಂಪೆನಿಗೆ 20 ಲಕ್ಷ ರೂ. ದಂಡ ವಿಧಿಸಿದ್ದು, ಭವಿಷ್ಯದ ಟೋಲ್ ಪ್ಲಾಝಾ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಅದರ ಮೇಲೆ ನಿಷೇಧವನ್ನೂ ಹೇರಿದೆ.







