ಜಮ್ಮುಕಾಶ್ಮೀರ | ಸೇನಾ ಸಿಬ್ಬಂದಿ ಹಲ್ಲೆ ನಡೆಸಿರುವ ಬಗ್ಗೆ ಆರೋಪಿಸಿದ ಇಂದಿರಾಗಾಂಧಿ ಮುಕ್ತ ವಿವಿ ಪ್ರೊಫೆಸರ್ : ತನಿಖೆಗೆ ಆದೇಶ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಗುರುವಾರ ರಾತ್ರಿ ವಾಹನ ತಪಾಸಣೆ ಮಾಡುವ ವೇಳೆ ಯಾವುದೇ ಪ್ರಚೋದನೆ ಇಲ್ಲದೇ ಸೇನೆ ಸಿಬ್ಬಂದಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ (ಇಗ್ನೋ) ಪ್ರೊಫೆಸರ್ ಆರೋಪಿಸಿರುವ ಬೆನ್ನಲ್ಲೇ ಈ ಬಗ್ಗೆ ತನಿಖೆ ನಡೆಸುವಂತೆ ಭಾರತೀಯ ಸೇನೆ ಆದೇಶಿಸಿದೆ.
ನೌಶೇರಾದ ಗಡಿಗ್ರಾಮ ಲಾಮ್ ಬಳಿ ನಡೆದ ಈ ಘಟನೆಯಲ್ಲಿ ನನ್ನ ತಲೆಗೆ ಗಾಯಗಳಾಗಿವೆ ಎಂದು ಪ್ರೊಫೆಸರ್ ಲಿಯಾಖತ್ ಅಲಿ ಆರೋಪಿಸಿರುವುದಾಗಿ ಸೇನಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಲಿ ಅವರ ತಲೆಯಿಂದ ರಕ್ತ ಸೋರುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ʼಪ್ರೊಫೆಸರ್ ಸೇನಾ ಸಿಬ್ಬಂದಿಯಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಈ ವೇಳೆ ಸಂಘರ್ಷದಿಂದ ಗಾಯಗಳಾಗಿರಬಹುದುʼ ಎಂದು ಸೇನೆ ಹೇಳಿದೆ.
"ರಾಜೌರಿ ಜಿಲ್ಲೆಯಲ್ಲಿ ಕೆಲವರ ಮೇಲೆ ಸೇನಾ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸೂಕ್ಷ್ಮ ಪ್ರದೇಶದಲ್ಲಿ ಶಂಕಿತರು ವಾಹನದಲ್ಲಿ ತಿರುಗಾಡುತ್ತಿದ್ದಾರೆ ಎಂಬ ಮಾಹಿತಿ ಸೇನೆಗೆ ಲಭ್ಯವಾಗಿತ್ತು. ಅದರಂತೆ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಪ್ರಾಥಮಿಕ ಮಾಹಿತಿಯಂತೆ ವಾಹನವನ್ನು ತಡೆದಾಗ ಆ ವ್ಯಕ್ತಿ ಸೈನಿಕರಿಂದ ಶಸ್ತ್ರಾಸ್ತ್ರ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆʼ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಯಾವುದೇ ಸಿಬ್ಬಂದಿ ತಪ್ಪು ಮಾಡಿದ್ದಾರೆ ಎನ್ನುವುದು ದೃಢಪಟ್ಟರೆ, ಕಾನೂನಿನ ಅನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಭಯೋತ್ಪಾದಕರ ನಿಗ್ರಹದ ವಿಚಾರದಲ್ಲೂ ಗರಿಷ್ಠ ಗುಣಮಟ್ಟದ ವೃತ್ತಿಪರತೆ ಮತ್ತು ಶಿಸ್ತನ್ನು ಸೇನೆ ಪಾಲಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ.







