ಟರ್ಕಿಯ ಇಸ್ತಾಂಬುಲ್ ಕಾಂಗ್ರೆಸ್ ಸೆಂಟರ್ ಅನ್ನು ಕಾಂಗ್ರೆಸ್ ಪಕ್ಷದ ನೋಂದಾಯಿತ ಕಚೇರಿ ಎಂದ ಅರ್ನಬ್ ಗೋಸ್ವಾಮಿ!
ವಿಡಿಯೋ ಹಂಚಿಕೊಂಡ ಅಮಿತ್ ಮಾಳವೀಯ; ಸುಳ್ಳನ್ನು ಬಯಲಿಗೆಳೆದ ಫ್ಯಾಕ್ಟ್ ಚೆಕರ್ ಮುಹಮ್ಮದ್ ಝುಬೇರ್

Screengrab from the video | X
ಹೊಸದಿಲ್ಲಿ: ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ, ಕಾಂಗ್ರೆಸ್ ಪಕ್ಷವು ಟರ್ಕಿಯಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿದೆ ಎಂದು ಸುಳ್ಳು ಸುದ್ದಿ ಹರಡಿದ್ದಾರೆ.
"ವೀಕ್ಷಕರೇ, ಕಾಂಗ್ರೆಸ್ ಪಕ್ಷವು ಟರ್ಕಿಯಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ? ಟರ್ಕಿಯಲ್ಲಿ ಕಾಂಗ್ರೆಸ್ ಗೇನು ವ್ಯವಹಾರ?" ಎಂದು ತಮ್ಮ ಟಿವಿ ವಾಹಿನಿಯ ಪ್ರಸಾರದ ವೇಳೆ ಅರ್ನಬ್ ಗೋಸ್ವಾಮಿ ಅವರು ಪ್ರಶ್ನಿಸುತ್ತಿರುವ ವೀಡಿಯೊ ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಫ್ಯಾಕ್ಟ್ ಚೆಕರ್ ಮುಹಮ್ಮದ್ ಝುಬೇರ್, ಅರ್ನಬ್ ಗೋಸ್ವಾಮಿ ಅವರ ಸುಳ್ಳು ಹೇಳಿಕೆಯನ್ನು ಬಯಲಿಗೆಳೆದಿದ್ದಾರೆ. ಬಿಜೆಪಿ ಐಟಿ ಸೆಲ್ ನ ಅಮಿತ್ ಮಾಳವೀಯ ಅವರು ಹಂಚಿಕೊಂಡಿರುವ ಗೋಸ್ವಾಮಿ ಅವರ ಹೇಳಿಕೆಯ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಝುಬೇರ್ ಪೋಸ್ಟ್ ಮಾಡಿದ್ದಾರೆ.
"ರಾಹುಲ್ ಗಾಂಧಿ ಅವರು ಇದರ ಬಗ್ಗೆ ವಿವರಿಸಬಹುದೇ? ಇದು ವಿಲಕ್ಷಣ ಸಂಗತಿ. ಇದನ್ನು ವಿವರಿಸಲು ಸಾಧ್ಯವಿಲ್ಲ. ಇದರ ಬಗ್ಗೆ ಭಾರತವು ತಿಳಿದುಕೊಳ್ಳಲು ಬಯಸುತ್ತಿದೆ. ನೆನಪಿಡಿ: ಶತ್ರುವಿನ ಸ್ನೇಹಿತ ಕೂಡ ಶತ್ರು", ಎಂದು ಮಾಳವೀಯ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಫ್ಯಾಕ್ಟ್ ಚೆಕಿಂಗ್ ವೆಬ್ ಸೈಟ್ ಆಲ್ಟ್ ನ್ಯೂಸ್ನ ಸಹ-ಸಂಸ್ಥಾಪಕ ಝುಬೇರ್, ಗೋಸ್ವಾಮಿ ಉಲ್ಲೇಖಿಸಿದ ಸ್ಥಳವು ಇಸ್ತಾಂಬುಲ್ ಕಾಂಗ್ರೆಸ್ ಸೆಂಟರ್ ಆಗಿದೆ. ಇದು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲ, ಸಾಮಾಜಿಕ, ಸಾಂಸ್ಕೃತಿಕ ಮತ್ತು ವೃತ್ತಿಪರ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಸಿದ್ಧ ಸಮಾವೇಶ ಕೇಂದ್ರವಾಗಿದೆ ಎಂದು ಬಹಿರಂಗಪಡಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ವಿಜಯ್ ಜಾಲಿ ಅವರ ಪೋಸ್ಟ್ ಅನ್ನು ಮುಹಮ್ಮದ್ ಝುಬೈರ್ ಉಲ್ಲೇಖಿಸಿದ್ದಾರೆ. ಪೋಸ್ಟ್ ನಲ್ಲಿ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೋಗನ್ ಅವರು ಬಿಜೆಪಿಯ ಶಾಲು ಧರಿಸಿರುವುದು ಕಂಡು ಬರುತ್ತದೆ.
ಸುಳ್ಳು ಮಾಹಿತಿಯನ್ನು ಹರಡಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳ ಬಳಕೆದಾರು ಅರ್ನಬ್ ಗೋಸ್ವಾಮಿಯನ್ನು ಟೀಕಿಸಿದ್ದಾರೆ.
"ಅರ್ನಬ್ ಅವರ ಸುದ್ದಿಯನ್ನು ಆನಂದಿಸುವ ಜನರು ಇದಕ್ಕೆ ಅರ್ಹರು!" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ರಾಷ್ಟ್ರವು ಇದನ್ನು ತಿಳಿದುಕೊಳ್ಳಲು ಬಯಸುವುದಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ.







