2023ರಲ್ಲಿ 28 ಕೋಟಿ ಮಂದಿ ತೀವ್ರ ಹಸಿವಿನಿಂದ ಬಳಲಿದ್ದಾರೆ: ವಿಶ್ವಸಂಸ್ಥೆ ವರದಿ
ಸಾಂದರ್ಭಿಕ ಚಿತ್ರ Photo: PTI
ಹೊಸದಿಲ್ಲಿ: ಕಳೆದ ವರ್ಷ ವಿಶ್ವದಾದ್ಯಂತ ಆಹಾರ ಭದ್ರತೆ ಮತ್ತಷ್ಟು ಹದಗೆಟ್ಟಿದ್ದು, ಪ್ರಮುಖವಾಗಿ ಗಾಝಾ ಮತ್ತು ಸುಡಾನ್ ಸಂಘರ್ಷದಿಂದಾಗಿ ಒಟ್ಟು 282 ದಶಲಕ್ಷ ಮಂದಿ ತೀವ್ರ ಹಸಿವಿನಿಂದ ಬಳಲಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಬಹಿರಂಗಪಡಿಸಿದೆ. ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಮತ್ತು ಅಭಿವೃದ್ಧಿ ಗುಂಪುಗಳು ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ.
ವ್ಯತಿರಿಕ್ತ ಹವಾಮಾನ ಪರಿಸ್ಥಿತಿ ಮತ್ತು ಆರ್ಥಿಕ ಆಘಾತಗಳು ಕೂಡಾ ಆಹಾರ ಅಭದ್ರತೆಗೆ ಕಾರಣವಾಗಿವೆ. 2022ಕ್ಕೆ ಹೋಲಿಸಿದರೆ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ 22 ದಶಲಕ್ಷದಷ್ಟು ಹೆಚ್ಚಿದೆ ಎಂದು ಆಹಾರ ಭದ್ರತೆ ಮಾಹಿತಿ ಜಾಲ (ಎಫ್ಎಸ್ಐಎನ್) ಬಿಡುಗಡೆ ಮಾಡಿದ ಜಾಗತಿಕ ಆಹಾರ ಸಮಸ್ಯೆ ಕುರಿತ ವರದಿಯಲ್ಲಿ ವಿವರಿಸಲಾಗಿದೆ.
2023ರಲ್ಲಿ ಸತತ ಐದನೇ ವರ್ಷ ತೀವ್ರ ಆಹಾರ ಅಭದ್ರತೆ ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಳವಾಗಿದ್ದು, ಜೀವಕ್ಕೆ ಅಪಾಯಕಾರಿ ಪ್ರಮಾಣದಲ್ಲಿ ಆಹಾರದ ಅಲಭ್ಯತೆಯನ್ನು ತೀವ್ರ ಅಭದ್ರತೆ ಎಂದು ಪರಿಗಣಿಸಲಾಗುತ್ತದೆ. ಕಳೆದ ವರ್ಷದ ಹೆಚ್ಚಳಕ್ಕೆ ಪ್ರಮುಖ ಕಾರಣ ಭೌಗೋಳಿಕ ಪ್ರದೇಶವನ್ನು ವಿಸ್ತರಿಸಿರುವುದು ಎನ್ನಲಾಗಿದ್ದು, 12 ದೇಶಗಳಲ್ಲಿ ಪರಿಸ್ಥಿತಿ ಹದಗೆಡುತ್ತಿರುವುದನ್ನು ಕೂಡಾ ಕಾರಣವಾಗಿ ಉಲ್ಲೇಖಿಸಲಾಗಿದೆ.
ಗಾಝಾದಲ್ಲಿ 6 ಲಕ್ಷ ಮಂದಿ ಸೇರಿದಂತೆ ಸುಮಾರು 7 ಲಕ್ಷ ಮಂದಿ ಕಳೆದ ವರ್ಷ ತೀವ್ರ ಹಸಿವಿನಿಂದ ಬಳಲಿದ್ದಾರೆ. ಯುದ್ಧಪೀಡಿತ ಫೆಲಸ್ತೀನ್ ಪ್ರದೇಶದಲ್ಲಿ ಈ ಸಂಖ್ಯೆ 1.1 ದಶಲಕ್ಷಕ್ಕೆ ಏರಿದೆ. ಈ ಜಾಗತಿಕ ವರದಿಯನ್ನು 2016ರಲ್ಲಿ ಆರಂಭಿಸಿದ ಬಳಿಕ ಇದುವರೆಗೆ ಆಹಾರ ಅಭದ್ರತೆ ಎದುರಿಸುತ್ತಿರುವವರ ಸಂಖ್ಯೆ 108 ದಶಲಕ್ಷದಿಂದ 282 ದಶಲಕ್ಷಕ್ಕೆ ಹೆಚ್ಚಿದೆ.