ಉತ್ತರ ಪ್ರದೇಶ | ವೈದ್ಯೆಗೆ ಜೈಶೆ ಮೊಹಮ್ಮದ್ ಸಂಘಟನೆ ಜೊತೆ ನಂಟು; ತನಿಖಾ ಏಜೆನ್ಸಿಗಳ ಆರೋಪ

Photo: PTI
ಹೊಸದಿಲ್ಲಿ: ಜಮ್ಮುಕಾಶ್ಮೀರ, ಹರ್ಯಾಣ ಹಾಗೂ ಉತ್ತರಪ್ರದೇಶದಲ್ಲಿ ಕಾರ್ಯಾಚರಿಸುತ್ತಿತ್ತೆಂದು ಶಂಕಿಸಲಾದ ಉಗ್ರಗಾಮಿ ಜಾಲವೊಂದನ್ನು ತನಿಖಾ ಏಜೆನ್ಸಿಗಳು ಸೋಮವಾರ ಭೇದಿಸಿದ ಬಳಿಕ ಬಂಧಿತರಾದ ಆರೋಪಿಗಳಲ್ಲಿ ಒಬ್ಬಳಾದ ವೈದ್ಯೆ ಡಾ. ಶಾಹೀನ್ ಸಯೀದ್, ಭಾರತದಲ್ಲಿ ಪಾಕ್ ಮೂಲದ ಉಗ್ರಗಾಮಿ ಗುಂಪು ಜೈಶೆ ಮೊಹಮ್ಮದ್ ನ ಮಹಿಳಾ ನೇಮಕಾತಿ ಘಟಕವನ್ನು ಸ್ಥಾಪಿಸುವ ಹೊಣೆಯನ್ನು ವಹಿಸಿದ್ದಳೆಂದು ತನಿಖಾ ಏಜೆನ್ಸಿಗಳು ಆಪಾದಿಸಿವೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಜಮಾತುಲ್ ಮೊಮಿನಾತ್ ಎಂಬ ಹೆಸರಿನ ಈ ಸಂಘಟನೆಯು ಸುಶಿಕ್ಷಿತ ಮಹಿಳೆಯರು ಹಾಗೂ ವೃತ್ತಿಪರ ಮಹಿಳೆಯರನ್ನು ಈ ಗುಂಪಿನ ಜಾಲಕ್ಕೆ ಸೆಳೆಯುವ ಉದ್ದೇಶವನ್ನು ಹೊಂದಿತ್ತು ಎನ್ನಲಾಗಿದೆ.
ಸೋಮವಾರ ಸಂಜೆ ದಿಲ್ಲಿಯ ಕೆಂಪುಕೋಟೆ ಪ್ರದೇಶದಲ್ಲಿ ನಡೆದ ಭೀಕರ ಕಾರ್ ಸ್ಫೋಟ ನಡೆಯುವುದಕ್ಕೆ ಕೆಲವೇ ತಾಸುಗಳ ಮೊದಲು ಈ ಜಾಲವನ್ನು ತನಿಖಾ ಸಂಸ್ಥೆಗಳು ಭೇದಿಸಿದ್ದವು.
ದಿಲ್ಲಿ ಕಾರ್ ಸ್ಫೋಟಕ್ಕೂ, ಈ ಜಾಲಕ್ಕೂ ಒಂದಕ್ಕೊಂದು ಸಂಬಂಧವಿರುವುದಾಗಿ ತನಿಖಾ ಏಜೆನ್ಸಿಗಳು ಶಂಕಿಸಿವೆ.
ವೃತ್ತಿಪರ, ಸುಶಿಕ್ಷಿತ ಭಯೋತ್ಪಾದಕ ಜಾಲವನ್ನು ಜೆಇಎಂ ಹಾಗೂ ಅನ್ಸಾರ್ ಘಝವತುಲ್ ಹಿಂದ್ ಗುಂಪುಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆಯೆಂದು ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





