ವಿಧಿ 35ಎ ಜಮ್ಮುಕಾಶ್ಮೀರದ ಹೊರಗಿನ ನಿವಾಸಿಗಳ ಪ್ರಮುಖ ಹಕ್ಕುಗಳನ್ನು ಕಸಿದಿತ್ತು: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಸಂವಿಧಾನದ 35ಎ ವಿಧಿಯು ಜಮ್ಮು ಕಾಶ್ಮೀರದಲ್ಲಿ ವಾಸವಾಗಿಲ್ಲದ ಜನರನ್ನು ಕೆಲ ಪ್ರಮುಖ ಸಂವಿಧಾನಿಕ ಹಕ್ಕುಗಳಿಂದ ವಂಚಿತರನ್ನಾಗಿಸಿದೆ ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.
“ಅವಕಾಶಗಳಲ್ಲಿ ಸಮಾನತೆ, ರಾಜ್ಯ ಸರ್ಕಾರದಲ್ಲಿ ಉದ್ಯೋಗ ಹಾಗೂ ಭೂಮಿ ಖರೀದಿಸುವ ಹಕ್ಕು-ಇವೆಲ್ಲವನ್ನೂ ಈ ವಿಧಿ ನಾಗರಿಕರಿಂದ ಸೆಳೆಯುತ್ತದೆ… ಏಕೆಂದರೆ ನಿವಾಸಿಗಳು (ಜಮ್ಮು ಕಾಶ್ಮೀರದ) ವಿಶೇಷ ಹಕ್ಕುಗಳನ್ನು ಹೊಂದಿದ್ದರು ಮತ್ತು ಅನಿವಾಸಿಗಳನ್ನು ಹೊರತುಪಡಿಸಲಾಗಿತ್ತು,” ಎಂದು ಅವರು ಹೇಳಿದರು.
ಅದೇ ಸಮಯ ಜಮ್ಮು ಮತ್ತು ಕಾಶ್ಮೀರದ ಸಂವಿಧಾನಕ್ಕಿಂತ ಉನ್ನತ ವೇದಿಕೆಯಲ್ಲಿ ಭಾರತದ ಸಂವಿಧಾನವಿದೆ ಎಂಬ ಕೇಂದ್ರದ ಅಭಿಪ್ರಾಯಕ್ಕೂ ಅವರು ಸಹಮತ ವ್ಯಕ್ತಪಡಿಸಿದರು.
ಮುಖ್ಯ ನ್ಯಾಯಮೂರ್ತಿಗಳ ಈ ಹೇಳಿಕೆಗಳು, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ವಿಧಿ 370 ಅನ್ನು ರದ್ದುಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯ 11ನೇ ದಿನದಂದು ಬಂದಿವೆ.
ವಿಧಿ 370 ಜೊತೆಗೆ ಆಗಸ್ಟ್ 2019ರಲ್ಲಿ ರದ್ದುಗೊಳಿಸಲಾಗಿದ್ದ ವಿಧಿ 35ಎ, ಜಮ್ಮು ಕಾಶ್ಮೀರದ ಶಾಸಕಾಂಗಕ್ಕೆ ಖಾಯಂ ನಿವಾಸಿಗಳನ್ನು ಗುರುತಿಸಲು ಹಾಗೂ ಅವರಿಗೆ ಸರಕಾರಿ ಉದ್ಯೋಗ, ಸ್ಥಿರಾಸ್ತಿ ಮುಂತಾದವುಗಳ ಕುರಿತಂತೆ ವಿಶೇಷ ಹಕ್ಕುಗಳು ಮತ್ತು ಸವಲತ್ತುಗಳನ್ನು ಒದಗಿಸಿತ್ತು.
“ವಿಧಿ 16(1) ಅಡಿಯ ಹಕ್ಕನ್ನು ಕಸಿಯಲಾಗಿದ್ದು, ಅದು ರಾಜ್ಯ ಸರ್ಕಾರದ ಉದ್ಯೋಗ. ರಾಜ್ಯ ಸರ್ಕಾರದ ಉದ್ಯೋಗ ಪಡೆಯುವ ಹಕ್ಕನ್ನು ಒದಗಿಸಿತ್ತು. ಇದನ್ನು ಸಂರಕ್ಷಿಸಲಾಗಿದೆಯಾದರೂ ಇನ್ನೊಂದೆಡೆ ವಿಧಿ 35ಎ ನೇರವಾಗಿ ಆ ಮೂಲಭೂತ ಹಕ್ಕನ್ನು ಕಸಿದಿದೆ ಮತ್ತು ಈ ನಿಟ್ಟಿನಲ್ಲಿ ಪ್ರಶ್ನಿಸುವುದರಿಂದಲೂ ರಕ್ಷಣೆ ಪಡೆದಿದೆ,” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
“ಅಂತೆಯೇ ವಿಧಿ 19 ದೇಶದ ಯಾವುದೇ ಭಾಗದಲ್ಲಿ ಜೀವಿಸುವ ಹಕ್ಕನ್ನು ಒದಗಿಸುತ್ತದೆ. ಹೀಗೆ ಮೂರು ಮೂಲಭೂತ ಹಕ್ಕುಗಳನ್ನು 35ಎ ಕಸಿದಿದೆ. ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನೂ ಸೆಳೆಯಲಾಗಿದೆ,” ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಾತನಾಡಿ, “ಸರ್ಕಾರದ ಕ್ರಮವು ಜಮ್ಮು ಕಾಶ್ಮೀರದ ಜನರನ್ನು ದೇಶದ ಇತರ ಭಾಗದ ಜನರಂತೆಯೇ ಪರಿಗಣಿಸುತ್ತದೆ. ಜಮ್ಮು ಕಾಶ್ಮೀರದಲ್ಲಿ ಈ ಹಿಂದೆ ಜಾರಿಯಾಗದ ಕಲ್ಯಾಣ ಯೋಜನೆಗಳನ್ನೂ ಜಾರಿಗೊಳಿಸಲು ಅನುವು ಮಾಡಿಕೊಡುತ್ತದೆ ಎಂದರು. ವಿಧಿ 370 ರದ್ದುಗೊಳಿಸುವ ತನಕ ಭಾರತದ ಸಂವಿಧಾನಕ್ಕೆ ಮಾಡಿದ ಯಾವುದೇ ತಿದ್ದುಪಡಿ ಜಮ್ಮು ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ಲ. ಆದ್ದರಿಂದ 2019ರ ತನಕ ಅಲ್ಲಿ ಶಿಕ್ಷಣ ಹಕ್ಕು ಕಾಯಿದೆ ಜಾರಿಗೊಳಿಸಲಾಗಿರಲಿಲ್ಲ,” ಎಂದರು.







