ದೇಶದ ಅತ್ಯಂತ ಕಿರಿಯ ಐಜಿಪಿ ಅರುಣ್ ಮೋಹನ್ ಜೋಶಿ
40 ನೇ ವಯಸ್ಸಿಗೆ ಐಜಿ ಹುದ್ದೆಗೇರಿದ ಐಪಿಎಸ್ ಅಧಿಕಾರಿ
ಅರುಣ್ ಮೋಹನ್ ಜೋಶಿ | Photo: news18.com
ಹೊಸದಿಲ್ಲಿ : ಇತ್ತೀಚಿನ ಬೆಳವಣಿಗೆಯಲ್ಲಿ, ಉತ್ತರಾಖಂಡದಲ್ಲಿ ಭಾರತೀಯ ಪೊಲೀಸ್ ಸೇವೆಯಲ್ಲಿರುವ ಕೆಲವು ಅಧಿಕಾರಿಗಳು ಪದೋನ್ನತಿ ಇಲಾಖಾ ಸಮಿತಿ(DPC) ಯಿಂದ ಬಡ್ತಿ ಪಡೆದರು. ಇದರಲ್ಲಿ ಐಪಿಎಸ್ ಅಧಿಕಾರಿ ಸ್ವೀಟಿ ಅಗರ್ವಾಲ್, ಐಪಿಎಸ್ ಅಧಿಕಾರಿ ಅನಂತ್ ಶಂಕರ್ ತಕ್ವಾಲಿ, ರಾಜೀವ್ ಸ್ವರೂಪ್ ಮತ್ತು ಐಪಿಎಸ್ ಅಧಿಕಾರಿ ಅರುಣ್ ಮೋಹನ್ ಜೋಶಿ ಸೇರಿದ್ದಾರೆ. ಪದೋನ್ನತಿ ಪಡೆದು ಬಡ್ತಿ ಪಡೆದ ಅಧಿಕಾರಿಗಳಲ್ಲಿ ಐಪಿಎಸ್ ಅರುಣ್ ಮೋಹನ್ ಜೋಶಿ ಅವರು ದೇಶದ ಅತ್ಯಂತ ಕಿರಿಯ ಐಜಿ (ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2006 ರ ಬ್ಯಾಚ್ ಐಪಿಎಸ್ ಅಧಿಕಾರಿ ಅರುಣ್ ಮೋಹನ್ ಜೋಶಿ ಉತ್ತರಾಖಂಡದವರೇ ಆಗಿದ್ದಾರೆ. ಚಕ್ರತಾ ಪರ್ವತ ಪ್ರದೇಶ ಅವರ ಹುಟ್ಟೂರು. 23 ನೇ ವಯಸ್ಸಿನಲ್ಲಿ ಅವರು ಭಾರತೀಯ ಪೊಲೀಸ್ ಸೇವೆಗೆ, 2006 ರಲ್ಲಿ ಆಯ್ಕೆಯಾದರು. ಆಗ ಅವರೇ ದೇಶದ ಅತ್ಯಂತ ಕಿರಿಯ ಐಪಿಎಸ್ ಅಧಿಕಾರಿ ಎಂಬ ದಾಖಲೆ ಮಾಡಿದ್ದರು. ಜೋಶಿಯವರ ಬಳಿಕ ಹಲವರು ಚಿಕ್ಕ ವಯಸ್ಸಿನಲ್ಲಿ IPS ಸೇವೆಗೆ ಸೇರಿದ ಪಟ್ಟಿಯಲ್ಲಿ ಸೇರಿದ್ದಾರೆ.
2004 ರ ಬ್ಯಾಚ್ ನ IPS ಅಧಿಕಾರಿ ಗೌರವ್ ರಜಪೂತ್ ಅವರು 2022 ರಲ್ಲಿ 41 ನೇ ವಯಸ್ಸಿನಲ್ಲಿ ಇನ್ಸ್ ಪೆಕ್ಟರ್ ಜನರಲ್ ಶ್ರೇಣಿಯ ರ್ಯಾಂಕ್ ಪಡೆದ ದೇಶದ ಅತ್ಯಂತ ಕಿರಿಯ ಐಜಿ ಎಂಬುದು ಈ ವರೆಗಿನ ದಾಖಲೆಯಾಗಿತ್ತು. ಆದರೆ ಈಗ ಅರುಣ್ ಮೋಹನ್ ಜೋಶಿ ಈಗ 40 ನೇ ವಯಸ್ಸಿಗೆ ಇನ್ಸ್ ಪೆಕ್ಟರ್ ಜನರಲ್ ಆಗುವ ಮೂಲಕ ಆ ಸಾಧನೆಯನ್ನು ಅಳಿಸಿ ಹಾಕಿದ್ದಾರೆ.
ಜೋಶಿ ಚಕ್ರತಾ ಪ್ರದೇಶದ ಮುಂಧೌಲ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಜೋಶಿ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು, ಅವರಿಗೆ ಮೂವರು ಸಹೋದರರು ಮತ್ತು ಓರ್ವ ಸಹೋದರಿ ಇದ್ದಾರೆ. ಅವರ ಪ್ರದೇಶದಲ್ಲಿ ಅಂತಹ ಯಾವುದೇ ಶಿಕ್ಷಣ ಸಂಸ್ಥೆಯಿಲ್ಲದ ಕಾರಣ, ಜೋಶಿಯವರು ಹರಿದ್ವಾರ ಮತ್ತು ಡೆಹ್ರಾಡೂನ್ನಲ್ಲಿ ತಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ, ಜೋಶಿ ಐಐಟಿ ರೂರ್ಕಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದರು.
ಜೋಶಿ ಅವರು ಚಿಕ್ಕವರಿದ್ದಾಗ ತಾಯಿಯನ್ನು ಕಳೆದುಕೊಂಡರು. ತಮ್ಮ ಸಹೋದರಿ ಅವರನ್ನು ತಾಯಿಯಂತೆ ನೋಡಿಕೊಂಡರು ಎಂದು ಸ್ಮರಿಸುತ್ತಾರೆ ಅರುಣ್ ಜೋಶಿ. ಮತ್ತೊಂದೆಡೆ, ತನ್ನ ತಂದೆ ಪೊಲೀಸ್ ಆಗಲು ಪ್ರೇರೇಪಿಸಿದರು ಎಂದು ಅರುಣ್ ಮೋಹನ್ ಜೋಶಿ ಹೇಳುತ್ತಾರೆ.
ಈ ಮೊದಲು, ಅರುಣ್ ಮೋಹನ್ ಜೋಶಿ ಅವರು ಹರಿದ್ವಾರದ ಎಸ್ಎಸ್ಪಿಯಾಗಿ ನೇಮಕಗೊಂಡಿದ್ದರು. ಅಲ್ಲಿ ಅವರು ಕನ್ವರ್ ಮೇಳದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಮುಂಬೈನಿಂದ ಕಾಣೆಯಾದ ಹುಡುಗಿಯನ್ನು ರಕ್ಷಿಸಿ ಅಪರಾಧಿಗಳನ್ನು ಬಂಧಿಸಿದ ಕಾರಣ ಹರಿದ್ವಾರದ ಪ್ರದೇಶದಲ್ಲಿ ಹೆಸರುವಾಸಿಯಾಗಿದ್ದಾರೆ. ಈ ಹಿಂದೆ, ಅವರು ಉತ್ತರಕಾಶಿಯ ಎಸ್ಪಿಯಾಗಿ, ರೂರ್ಕಿಯ ಎಎಸ್ಪಿಯಾಗಿ ಮತ್ತು ರಾಜ್ಯದಾದ್ಯಂತ ಅನೇಕ ಕಡೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಕೃಪೆ : news18