ಅತ್ಯಾಚಾರ ಪ್ರಕರಣದ ಅಪರಾಧಿ ಆಸಾರಾಂ ಬಾಪುಗೆ ಮಧ್ಯಂತರ ಜಾಮೀನು ಜು.7ರವರೆಗೆ ವಿಸ್ತರಣೆ

PC : PTI
ಅಹ್ಮದಾಬಾದ್: ಗುಜರಾತ್ ಉಚ್ಚ ನ್ಯಾಯಾಲಯವು 2013ರ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪುಗೆ ನೀಡಿರುವ ಮಧ್ಯಂತರ ಜಾಮೀನನ್ನು ಶುಕ್ರವಾರ ಜು.7ರವರೆಗೆ ವಿಸ್ತರಿಸಿದೆ.
ನ್ಯಾಯಮೂರ್ತಿಗಳಾದ ಇಲೇಶ ವೋರಾ ಮತ್ತು ಸಂದೀಪ ಭಟ್ಟ ಅವರ ವಿಭಾಗೀಯ ಪೀಠವು ಶುಕ್ರವಾರ ವಿಚಾರಣೆ ಸಂದರ್ಭದಲ್ಲಿ ಈ ಹಿಂದೆ ಮಾ.28ರಂದು ಮೂರು ತಿಂಗಳ ಅವಧಿಗೆ ಆಸಾರಾಮ್ ಬಾಪುಗೆ ಮಂಜೂರು ಮಾಡಿದ್ದ ತಾತ್ಕಾಲಿಕ ಜಾಮೀನನ್ನು ವಿಸ್ತರಿಸಿತು.
ಆಸಾರಾಮ್(86) ವೈದ್ಯಕೀಯ ಕಾರಣಗಳಿಂದಾಗಿ ಜಾಮೀನಿನಲ್ಲಿದ್ದಾನೆ.
ಆಸಾರಾಮ್ ಅರ್ಜಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅವರ ವಕೀಲರಿಗೆ ಸಾಧ್ಯವಾಗುವಂತೆ ಜಾಮೀನು ವಿಸ್ತರಿಸಲಾಗಿದ್ದು, ಮುಂದಿನ ವಿಚಾರಣೆಯು ಜು.2ಕ್ಕೆ ನಡೆಯಲಿದೆ.
ಗಮನಾರ್ಹವಾಗಿ, ಗುಜರಾತ್ ಹೈಕೋರ್ಟ್ ಈ ವರ್ಷದ ಮಾ.28ರಂದು ತಾತ್ಕಾಲಿಕವಾಗಿ ನೀಡಿರುವ ಜಾಮೀನು ಜು.30ರಂದು ಅಂತ್ಯಗೊಳ್ಳಲಿದೆ.
ಮಾ.28ರಂದು ನ್ಯಾಯಾಲಯವು ತಾತ್ಕಾಲಿಕ ಜಾಮೀನು ಮಂಜೂರು ಮಾಡಿತ್ತಾದರೂ ಜೋಧಪುರ ಉಚ್ಚ ನ್ಯಾಯಾಲಯದಿಂದ ಆದೇಶಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ 10 ದಿನಗಳು ವ್ಯರ್ಥವಾಗಿದ್ದವು ಮತ್ತು ಎ.7ರಂದು ತನ್ನ ಕಕ್ಷಿದಾರರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು ಎಂದು ಗುಜರಾತ್ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದ ಆಸಾರಾಮ್ ಪರ ವಕೀಲರು, ಅಗತ್ಯ ದಾಖಲೆಗಳನ್ನು ಸಲ್ಲಿಸಲು ಕೆಲವು ದಿನಗಳ ಕಾಲಾವಕಾಶವನ್ನು ಕೋರಿದ್ದರು.
ಆಸಾರಾಮ್ ಬಾಪುಗೆ ಈ ಹಿಂದೆ ಸರ್ವೋಚ್ಚ ನ್ಯಾಯಾಲಯವು ಮಂಜೂರು ಮಾಡಿದ್ದ ಜಾಮೀನು ಅವಧಿಯು ಮಾ.31ಕ್ಕೆ ಅಂತ್ಯಗೊಳ್ಳಲಿದ್ದರಿಂದ ಉಚ್ಚ ನ್ಯಾಯಾಲಯವು ಮಾ.28ರಂದು ಮೂರು ತಿಂಗಳ ಅವಧಿಗೆ ತಾತ್ಕಾಲಿಕ ಜಾಮೀನು ನೀಡಿತ್ತು.
ಪ್ರಸ್ತುತ ಪ್ರಕರಣದಲ್ಲಿ 2001ರಿಂದ 2006ರವರೆಗೆ ಅಹ್ಮದಾಬಾದ್ ಬಳಿಕ ಮೊಟೇರಾದಲ್ಲಿಯ ಆಶ್ರಮದಲ್ಲಿ ವಾಸವಾಗಿದ್ದಾಗ ಸೂರತ್ ಮೂಲದ ಶಿಷ್ಯೆಯ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ್ದ ಆರೋಪದಲ್ಲಿ ಜನವರಿ 2023ರಲ್ಲಿ ಗಾಂಧಿನಗರದ ನ್ಯಾಯಾಲಯವು ಆಸಾರಾಮ್ ಬಾಪುಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.
2013ರಲ್ಲಿ ರಾಜಸ್ಥಾನದ ತನ್ನ ಆಶ್ರಮದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರದ ಇನ್ನೊಂದು ಪ್ರಕರಣದಲ್ಲೂ ಅವರು ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.







