ಅಸಾರಾಮ್ ಬಾಪುಗೆ 6 ತಿಂಗಳು ಮಧ್ಯಂತರ ಜಾಮೀನು

ಅಸಾರಾಮ್ ಬಾಪು | Photo Credit : PTI
ಗಾಂಧಿನಗರ, ನ. 6: 2013ರ ಅತ್ಯಾಚಾರ ಪ್ರಕರಣದಲ್ಲಿ ಸ್ವಘೋಷಿತ ದೇವ ಮಾನವ ಅಸಾರಾಮ್ ಬಾಪುಗೆ ಗುಜರಾತ್ ಉಚ್ಚ ನ್ಯಾಯಾಲಯ ಗುರುವಾರ ವೈದ್ಯಕೀಯ ನೆಲೆಯಲ್ಲಿ 6 ತಿಂಗಳು ಮಧ್ಯಂತರ ಜಾಮೀನು ನೀಡಿದೆ.
ಜೋಧಪುರದಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಇದೇ ಕಾರಣಕ್ಕೆ ಅವರ ಶಿಕ್ಷೆಯನ್ನು ರಾಜಸ್ಥಾನದ ಉಚ್ಚ ನ್ಯಾಯಾಲಯ ಅಮಾನತುಗೊಳಿಸಿತ್ತು ಎಂದು ನ್ಯಾಯಾಲಯ ಗಮನಿಸಿದೆ.
ಜಾಮೀನು ವೈದ್ಯಕೀಯ ಚಿಕಿತ್ಸೆಗೆ ಮಾತ್ರ. ಅವರ ಅಪರಾಧ ಸಾಬೀತು ಹಾಗೂ ಜೀವಾವಧಿ ಶಿಕ್ಷೆ ಇನ್ನೂ ಮುಂದುವರಿದಿದೆ ಎಂದು ನ್ಯಾಯಮೂರ್ತಿಗಳಾದ ಇಲೇಶ್ ಜೆ. ವೋರಾ ಹಾಗೂ ಆರ್.ಟಿ. ವಾಛಾನಿ ಅವರ ಪೀಠ ಹೇಳಿದೆ.
ಅವರ ಆಶ್ರಮದಲ್ಲಿ 2013ರಲ್ಲಿ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದಲ್ಲಿ ಜೋಧಪುರ ನ್ಯಾಯಾಲಯ ಆಸಾರಾಂ ಬಾಪುಗೆ 2018 ಎಪ್ರಿಲ್ನಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಗಾಂಧಿನಗರದಲ್ಲಿ 2013ರಲ್ಲಿ ದಾಖಲಾದ ಪ್ರತ್ಯೇಕ ಅತ್ಯಾಚಾರ ಪ್ರಕರಣದಲ್ಲಿ ಗುಜರಾತ್ ನ್ಯಾಯಾಲಯ ಅವರಿಗೆ 2023ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅವರು ಪಿತೂರಿ ಹಾಗೂ ಸಾಕ್ಷಿಗಳಿಗೆ ಬೆದರಿಕೆ ಆರೋಪವನ್ನು ಕೂಡ ಎದುರಿಸುತ್ತಿದ್ದಾರೆ. ಎರಡೂ ಅಪರಾಧ ಸಾಬೀತನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.





