ಮಹಾರಾಷ್ಟ್ರದ ಭಾಷಾ ವಿವಾದ: ವಲಸಿಗರಿಗೆ ಹಿಂಸೆಯನ್ನು ಪಹಲ್ಗಾಮ್ ದಾಳಿಗೆ ಹೋಲಿಸಿದ ಬಿಜೆಪಿ ನಾಯಕ

ಆಶಿಷ್ ಶೇಲಾರ್ Photo - ANI
ಮುಂಬೈ: ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮುನ್ನ ಭಾಷಾ ವಿವಾದವು ಹೊರಹೊಮ್ಮಿದ್ದು, ಬಿಜೆಪಿ ನಾಯಕ ಹಾಗೂ ಸಚಿವ ಆಶಿಷ್ ಶೇಲಾರ್ ಅವರು ರಾಜ್ಯದಲ್ಲಿ ಮರಾಠಿ ಮಾತನಾಡದ ವಲಸಿಗರ ಮೇಲಿನ ಹಿಂಸಾಚಾರವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಹೋಲಿಸಿದ್ದಾರೆ.
ಭಾಷಾ ವಿವಾದವು ರಾಜ್ಯದ ರಾಜಕೀಯ ವಲಯದಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಮರಾಠಿ ಪರ ಗುಂಪುಗಳು, ವಿಶೇಷವಾಗಿ ರಾಜ್ ಠಾಕ್ರೆಯವರ ಮಹಾರಾಷ್ಟ್ರ ನವನಿರ್ಮಾಣ ಸಮಿತಿ(ಎಂಎನ್ಎಸ್)ಯು ಮರಾಠಿ ಭಾಷಿಕೇತರರ ಮೇಲೆ ಹಲ್ಲೆಯನ್ನು ನಡೆಸುತ್ತಿದೆ ಮತ್ತು ಬೆದರಿಕೆಯನ್ನೊಡ್ಡುತ್ತಿದೆ ಎಂದು ಆರೋಪಿಸಲಾಗಿದೆ. ಅಂಗಡಿಯೊಂದರ ನೌಕರ ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಎಂಎನ್ಎಸ್ ಕಾರ್ಯಕರ್ತರು ಅಂಗಡಿ ಮಾಲಿಕನಿಗೆ ಕಪಾಳ ಮೋಕ್ಷ ಮಾಡಿದ್ದನ್ನು ಇತ್ತೀಚಿನ ವೀಡಿಯೊವೊಂದು ತೋರಿಸಿದೆ.
‘ಪಹಲ್ಗಾಮ್ ನಲ್ಲಿ ಧರ್ಮದ ಆಧಾರದಲ್ಲಿ ಜನರನ್ನು ಕೊಲ್ಲಲಾಗಿತ್ತು. ಇಲ್ಲಿ ಮಹಾರಾಷ್ಟ್ರದಲ್ಲಿ ಹಿಂದುಗಳನ್ನು ಅವರ ಭಾಷೆಯ ಕಾರಣದಿಂದ ಕೊಲ್ಲಲಾಗುತ್ತಿದೆ. ಇವರೆಡರ ನಡುವೆ ವ್ಯತ್ಯಾಸವೇನಿದೆ?’ ಎಂದು ಶೇಲಾರ್ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸುವ ಮಹಾರಾಷ್ಟ್ರ ಸರಕಾರದ ಕ್ರಮವನ್ನು ವಿರೋಧಿಸಿದ್ದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ, ಇದು ಮರಾಠಿ ಭಾಷಿಕರ ಮೇಲೆ ಹಿಂದಿ ಹೇರುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದರು. ಬಳಿಕ ಸರಕಾರವು ತನ್ನ ಕ್ರಮದಿಂದ ಹಿಂದೆ ಸರಿದಿತ್ತು.
ಈ ಹಿನ್ನೆಲೆಯಲ್ಲಿ ಠಾಕ್ರೆದ್ವಯರು ಶನಿವಾರ ಮುಂಬೈನಲ್ಲಿ ಬೃಹತ್ ವಿಜಯೋತ್ಸವ ರ್ಯಾಲಿಯನ್ನು ನಡೆಸಿದ್ದರು.