ಅಶೋಕ್ ಚವಾಣ್ ರಾಜಿನಾಮೆ: ಆದರ್ಶ್ ಹಗರಣದ ಕಳಂಕದಿಂದ ಶ್ವೇತ ಪತ್ರದವರೆಗಿನ ಹಾದಿ…

ಅಶೋಕ್ ಚವಾಣ್ | Photo: PTI
ಮುಂಬೈ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಎರಡು ಬಾರಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಅಶೋಕ್ ಚವಾಣ್ ಸೋಮವಾರ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಆಸಕ್ತಿದಾಯಕ ಸಂಗತಿ ಯಾವುದೆಂದರೆ, ಅವರು ತಮ್ಮ ಎರಡನೆ ಅವಧಿಯ ಮುಖ್ಯಮಂತ್ರಿಗಿರಿಯಲ್ಲಿ ಯಾಕೆ ರಾಜಿನಾಮೆ ನೀಡಬೇಕಾಯಿತು ಎಂಬುದು.
ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಶಂಕರ್ ರಾವ್ ಚವಾಣ್ ಅವರ ಪುತ್ರ ಅಶೋಕ್ ಚವಾಣ್, ಮರಾಠವಾಡ ಪ್ರಾಂತ್ಯದ ಪ್ರಭಾವಶಾಲಿ ರಾಜಕಾರಣಿ. ಲೋಕಸಭಾ ಚುನಾವಣೆ ಸನಿಹದಲ್ಲಿರುವಾಗಲೇ ಅವರು ಪಕ್ಷವನ್ನು ತೊರೆದಿರುವುದು ಕಾಂಗ್ರೆಸ್ ಪಾಲಿಗೆ ದೊಡ್ಡ ಹಿನ್ನಡೆಯಾಗಿದೆ. ಮಹಾರಾಷ್ಟ್ರ ಕಾಂಗ್ರೆಸ್ನ ಹಿರಿಯ ನಾಯಕರಾದ ಮಿಲಿಂದ್ ದಿಯೊರಾ, ಬಾಬಾ ಸಿದ್ದೀಕಿ ಹಾಗೂ ಅಮರನಾಥ್ ರಾಜೂರ್ಕರ್ರಂಥವರು ಕಾಂಗ್ರೆಸ್ ಪಕ್ಷವನ್ನು ತೊರೆದ ಬೆನ್ನಿಗೇ ಅಶೋಕ್ ಚವಾಣ್ ಕೂಡಾ ಅದೇ ಹಾದಿ ಹಿಡಿದಿದ್ದಾರೆ.
ಅಶೋಕ್ ಚವಾಣ್ ಅವರನ್ನು ವರ್ಣರಂಜಿತ ರಾಜಕಾರಣದೊಂದಿಗೆ ಹಗರಣಗಳ ನೆರಳೂ ಹಿಂಬಾಲಿಸಿತ್ತು. ಅಶೋಕ್ ಚವಾಣ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದಾಗ ಜೈರಾಮ್ ರಮೇಶ್ ನಿಖರವಾಗಿ ಹೇಳಿದ್ದೂ ಅದನ್ನೇ.
ಅಶೋಕ್ ಚವಾಣ್ ಮತ್ತು ಆದರ್ಶ್ ಹಗರಣ
2008ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಗೇರುವ ಮೂಲಕ ಚವಾಣ್ ತಮ್ಮ ರಾಜಕೀಯ ಜೀವನದ ಉತ್ತುಂಗ ಹಂತವನ್ನು ಏರಿದರು. ಮುಂಬೈ ಮೇಲೆ ನಡೆದ 26/11 ದಾಳಿಯ ಕಾರಣಕ್ಕೆ ವಿಲಾಸ್ ರಾವ್ ದೇಶ್ಮುಖ್ ರಾಜಿನಾಮೆ ಸಲ್ಲಿಸಿದ್ದರಿಂದ ಆ ಅವಕಾಶ ಅವರನ್ನು ಅರಸಿ ಬಂದಿತ್ತು.
ಆದರೆ, ತಮ್ಮ ಮುಖ್ಯಮಂತ್ರಿಗಿರಿ ಅವಧಿಯಲ್ಲಿ ಅವರು ವಿವಾದಗಳಿಂದ ಮುಕ್ತವಾಗಿರಲೂ ಇಲ್ಲ. ಹಲವಾರು ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಿಲುಕಿಕೊಂಡ ಆದರ್ಶ್ ಸೊಸೈಟಿ ಹಗರಣದಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಶೋಕ್ ಚವಾಣ್ ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ಸಲ್ಲಿಸಬೇಕಾಗಿ ಬಂದಿತ್ತು.
ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ವಿಧವೆಯರಿಗಾಗಿ ನಿರ್ಮಾಣಗೊಂಡಿದ್ದ ಬಹುಮಹಡಿ ಆದರ್ಶ್ ಸೊಸೈಟಿ ಸಮುಚ್ಚಯದ ಫ್ಲ್ಯಾಟ್ಗಳನ್ನು ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಸೇನಾಧಿಕಾರಿಗಳು ಆಕ್ರಮಿಸಿಕೊಂಡಿದ್ದರಿಂದ ಆದರ್ಶ್ ಸೊಸೈಟಿ ಹಗರಣ ಸ್ಫೋಟಗೊಂಡಿತ್ತು. 2010ರಲ್ಲಿ ಬಯಲಾದ ಈ ಹಗರಣದಲ್ಲಿ ಜಮೀನು ಮಂಜೂರಾತಿಯಲ್ಲಿನ ಅಕ್ರಮಗಳು, ಪರಿಸರ ಉಲ್ಲಂಘನೆ ಹಾಗೂ ಹಿತಾಸಕ್ತಿ ಸಂಘರ್ಷಗಳು ಬೆಳಕಿಗೆ ಬಂದಿದ್ದವು.
ಆದರ್ಶ್ ಸೊಸೈಟಿ ಹಗರಣದಲ್ಲಿ ಅಶೋಕ್ ಚವಾಣ್ ಭಾಗಿಯಾಗಿದ್ದುದರಿಂದ ಅವರ ರಾಜಕೀಯ ಬದುಕಿಗೆ ಮತ್ತಷ್ಟು ಧಕ್ಕೆಯಾಯಿತು. ತಮ್ಮ ಕುಟುಂಬದ ಸದಸ್ಯರು ಹೊಂದಿದ್ದ ಮೂರು ಫ್ಲ್ಯಾಟ್ಗಳಿಗೆ ಸಂಬಂಧಿಸಿದಂತೆ ಅಶೋಕ್ ಚವಾಣ್ ವಿರುದ್ಧ ಅಕ್ರಮ ಆರೋಪಗಳೂ ಕೇಳಿ ಬಂದವು.
ಚವಾಣ್ ಮತ್ತು ಅವರ ಕುಟುಂಬವು ಹೊಂದಿದ್ದ ವೈಯಕ್ತಿಕ ಸಂಪತ್ತಿನ ಗಮನಾರ್ಹ ಕ್ರೋಡೀಕರಣವನ್ನು ಈ ಹಗರಣ ಬಯಲು ಮಾಡಿತ್ತು. ಆಗ ಅವರ ಕುಟುಂಬದ ಸಂಪತ್ತಿನ ಒಟ್ಟು ಮೌಲ್ಯವನ್ನು ರೂ. 2,200 ಕೋಟಿ ಎಂದು ಅಂದಾಜಿಸಲಾಗಿತ್ತು.
ನನ್ನ ನಡೆಗೂ ಆದರ್ಶ್ ಶ್ವೇತ ಪತ್ರಕ್ಕೂ ಸಂಬಂಧವಿಲ್ಲ: ಚವಾಣ್
ಅಶೋಕ್ ಚವಾಣ್ ತಮ್ಮೊಂದಿಗೆ ಆದರ್ಶ್ ಹಗರಣದ ಕಳಂಕವನ್ನು ಹೊತ್ತುಕೊಂಡಿದ್ದಾರೆ. 2011ರಲ್ಲಿ ಕೇಂದ್ರ ತನಿಖಾ ದಳವು ಈ ಹಗರಣದ ಪ್ರಾಥಮಿಕ ಮಾಹಿತಿ ವರದಿಯಲ್ಲಿ ಹೆಸರಿಸಿದ್ದ 11 ಮಂದಿ ಆರೋಪಿಗಳ ಪೈಕಿ ಚವಾಣ್ ಹೆಸರೂ ಕೂಡಾ ಸೇರಿತ್ತು.
"ತಮಗೆ ಎಲ್ಲವನ್ನೂ ನೀಡಿದ, ಬಹುಶಃ ತಮ್ಮ ಯೋಗ್ಯತೆಗಿಂತಲೂ ಹೆಚ್ಚೇ ನೀಡಿದ ಪಕ್ಷವನ್ನು ಯಾರಾದರೂ ತೊರೆದಾಗ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಪಾಲಿಗದು ಸದಾ ಆಕ್ರೋಶದ ಸಂಗತಿಯಾಗಿರುತ್ತದೆ. ಆದರೆ, ಯಾರು ದುರ್ಬಲರಾಗಿರುತ್ತಾರೊ ಅಂಥವರಿಗೆ ಸೈದ್ಧಾಂತಿಕ ಬದ್ಧತೆ ಅಥವಾ ವೈಯಕ್ತಿಕ ನಿಷ್ಠೆಗಿಂತ ಆ ವಾಷಿಂಗ್ ಮೆಷಿನ್ನೇ ಆಕರ್ಷಕವಾಗಿ ಕಾಣಿಸುತ್ತದೆ" ಎಂದು ಸೋಮವಾರ ಚವಾಣ್ ಪಕ್ಷವನ್ನು ತೊರೆದ ನಂತರ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದಾರೆ.
ಜೈರಾಮ್ ರಮೇಶ್ ಉಲ್ಲೇಖಿಸಿದ ವಾಷಿಂಗ್ ಮೆಷಿನ್ನ ಅರ್ಥವೆಂದರೆ, ಯಾರು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೊ ಅಂಥವರಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಆಕರ್ಷಕವಾಗಿ ಕಾಣಿಸುತ್ತದೆ ಎಂದು.
ಹಲವಾರು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಶರದ್ ಪವಾರ್ ಅವರ ಅಳಿಯ ಅಜಿತ್ ಪವಾರ್ ಕೂಡಾ ತಮ್ಮ ಮಾವ ಸ್ಥಾಪಿಸಿದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ವಿಭಜಿಸಿ, ನಂತರ ಮಹಾರಾಷ್ಟ್ರದಲ್ಲಿನ ಮೈತ್ರಿಕೂಟ ಸರ್ಕಾರದ ಪಾಲುದಾರನಾಗಿ ಭಾಗಿಯಾದ ಮತ್ತೊಬ್ಬ ರಾಜಕಾರಣಿ.
ಫೆ. 8ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಎನ್ಡಿಎ ಸರಕಾರದ ಹತ್ತು ವರ್ಷಗಳ ಆರ್ಥಿಕ ಸಾಧನೆಯನ್ನು ಬಿಂಬಿಸುವ ಶ್ವೇತ ಪತ್ರವನ್ನು ಲೋಕಸಭೆಯಲ್ಲಿ ಮಂಡಿಸಿದರು. ಇದರೊಂದಿಗೆ ಯುಪಿಎ ಸರಕಾರದ ಅವಧಿಯ ಹಗರಣಗಳನ್ನೂ ನಿರ್ಮಲಾ ಸೀತಾರಾಮನ್ ಪಟ್ಟಿ ಮಾಡಿದ್ದರು. ಈ ಪೈಕಿ ಅಶೋಕ್ ಚವಾಣ್ ಆರೋಪಿಯಾಗಿದ್ದ ಆದರ್ಶ್ ಹಗರಣವನ್ನೂ ಪಟ್ಟಿ ಮಾಡಿದ್ದರು.
ಆದರೆ, "ಆದರ್ಶ್ ಹಗರಣದ ಕುರಿತ ಪ್ರಧಾನಿಯ ಶ್ವೇತ ಪತ್ರಕ್ಕೂ, ನನ್ನ ರಾಜಿನಾಮೆಗೂ ಯಾವುದೇ ಸಂಬಂಧವಿಲ್ಲ" ಎಂದು ಅಶೋಕ್ ಚವಾಣ್ ಸ್ಪಷ್ಟನೆ ನೀಡಿದ್ದಾರೆ.
ಅಶೋಕ್ ಚವಾಣ್ರ ಪೆಟ್ರೋಲ್ ಪಂಪ್ ಮಂಜೂರಾತಿ
ಪುಣೆ ವಿಶ್ವವಿದ್ಯಾಲಯದಲ್ಲಿ ವಿಶ್ವವಿದ್ಯಾಲಯದ ಪ್ರತಿನಿಧಿ ಹುದ್ದೆಯನ್ನು ಹೊಂದಿದ್ದ ಶಂಕರ್ ರಾವ್ ಚವಾಣ್ ಅವರ ಪುತ್ರ ಅಶೋಕ್ ಚವಾಣ್, ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ಬದುಕನ್ನು ಪ್ರಾರಂಭಿಸಿದವರು.
ಅಶೋಕ್ ಚವಾಣ್ ಕುಟುಂಬವು ಪ್ರತ್ಯಕ್ಷವಾಗಿ ಅಥವಾ ತಮ್ಮ ಸಂಬಂಧಿಕರು ಹಾಗೂ ನಿಕಟವರ್ತಿಗಳ ಮೂಲಕ 25 ಆಟೊಮೊಬೈಲ್ ಮಳಿಗೆಗಳು, ವಸತಿ ಹಾಗೂ ವಾಣಿಜ್ಯ ನಿವೇಶನಗಳು ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನು ನಾಂದೇಡ್ ಹಾಗೂ ಮುಂಬೈನಲ್ಲಿ ಹೊಂದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ.
ಅಶೋಕ್ ಚವಾಣ್ ವಿರುದ್ಧ ಆದರ್ಶ್ ಹಗರಣ ಮಾತ್ರವಲ್ಲದೆ ಹಲವಾರು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳೂ ಕೇಳಿ ಬಂದಿದ್ದವು.
ತಮ್ಮ ರಾಜಕೀಯ ವೃತ್ತಿ ಜೀವನದ ಆರಂಭದಲ್ಲಿ ತಮ್ಮ ಕುಟುಂಬದ ಸದಸ್ಯರಿಗೆ ಪೆಟ್ರೋಲ್ ಪಂಪ್ ಮಂಜೂರು ಮಾಡಿದ ಸ್ವಜನಪಕ್ಷಪಾತದ ಆರೋಪ ಅಶೋಕ್ ಚವಾಣ್ ವಿರುದ್ಧ ಕೇಳಿ ಬಂದಿತ್ತು. 1993ರಲ್ಲಿ ಅಶೋಕ್ ಚವಾಣ್ರ ಚಿಕ್ಕಪ್ಪನ ಪುತ್ರನಿಗೆ ಮಂಜೂರಾಗಿದ್ದ ಪೆಟ್ರೋಲ್ ಪಂಪ್ ಅನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು.
ನಾಂದೇಡ್ನ ಕೆಲವು ಸಕ್ಕರೆ ಕಾರ್ಖಾನೆಗಳಲ್ಲಿ ಚವಾಣ್ ಕುಟುಂಬದ ಸದಸ್ಯರು ಗರಿಷ್ಠ ಪ್ರಮಾಣದ ಪಾಲುದಾರಿಕೆ ಹೊಂದಿದ್ದಾರೆ. 2000ನೇ ವರ್ಷದ ಆರಂಭದಲ್ಲಿ 200 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದ ಅವುಗಳ ಮೌಲ್ಯ ಒಟ್ಟಾರೆಯಾಗಿ ರೂ. 2,000 ಕೋಟಿ ಆಗಿತ್ತು.
ದಿನ ಕಳೆದಂತೆ ಚವಾಣ್ರ ಸಂಪತ್ತು ಸಾರ್ವಜನಿಕ ಚರ್ಚೆಯ ವಿಷಯವಾಗಿ ಬದಲಾಯಿತು. ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿರುವ ಪ್ರಮಾಣ ಪತ್ರದ ಪ್ರಕಾರ, 2004ರಲ್ಲಿ ರೂ. 11.78 ಕೋಟಿ ನಿವ್ವಳ ಮೌಲ್ಯ ಹೊಂದಿದ್ದ ಅವರ ಸಂಪತ್ತು 2009ರ ಹೊತ್ತಿಗೆ ರೂ. 24.61 ಕೋಟಿಗೆ ಏರಿಕೆಯಾಗಿ, 2019ರ ಹೊತ್ತಿಗೆ ರೂ. 50 ಕೋಟಿಗೆ ತಲುಪಿತ್ತು.
1987ರಲ್ಲಿ ನಾಂದೇಡ್ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗಿದ್ದ ಅಶೋಕ್ ಚವಾಣ್, 1992ರಲ್ಲಿ ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ರಾಜ್ಯ ಸಚಿವರಾಗಿದ್ದ ಅವರು, ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ, ಸಾರಿಗೆ, ಬಂದರುಗಳು, ಸಾಂಸ್ಕೃತಿಕ ವ್ಯವಹಾರಗಳು, ಕೈಗಾರಿಕೆಗಳು, ಗಣಿ ಮತ್ತು ಗೃಹ ವ್ಯವಹಾರಗಳಂಥ ಖಾತೆಗಳನ್ನು ವಿವಿಧ ರಾಜ್ಯ ಸಚಿವ ಸಂಪುಟಗಳಲ್ಲಿ ನಿಭಾಯಿಸಿದ್ದರು.
ಮಹಾರಾಷ್ಟ್ರ ರಾಜಕಾರಣದ ಚಿರಪರಿಚಿತ ಮುಖವಾದ ಅಶೋಕ್ ಚವಾಣ್, 1980ರ ಅಂತ್ಯದಲ್ಲೇ ರಾಷ್ಟ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡುವ ಪ್ರಯತ್ನ ಮಾಡಿದ್ದರು. ಆದರೆ, ಲೋಕಸಭೆ ಪ್ರವೇಶಿಸುವ ತಮ್ಮ ಪ್ರಥಮ ಪ್ರಯತ್ನದಲ್ಲಿ ವಿಫಲರಾಗಿದ್ದ ಅವರು, 1989ರ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಅದಕ್ಕೆ ಕಾರಣ, ಅವರಿಗೆ 'ಏಜೆನ್ಸಿದಾರ್' (ಹಲವಾರು ಏಜೆನ್ಸಿಗಳ ಒಡೆಯ) ಎಂಬ ಹಣೆಪಟ್ಟಿಯನ್ನು ವಿರೋಧಿಗಳು ಕಟ್ಟಿದ್ದು ಎಂಬ ವದಂತಿಗಳಿವೆ.
ಅವರು 2014ರ ಲೋಕಸಭಾ ಚುನಾವಣೆಯಲ್ಲಿ ನಾಂದೇಡ್ ಕ್ಷೇತ್ರದಿಂದ ಗೆಲುವು ಸಾಧಿಸಿದರಾದರೂ, 2019ರಲ್ಲಿ ಮತ್ತೆ ಪರಾಭವಗೊಂಡರು.
ಅಂತಹ ಅಶೋಕ್ ಚವಾಣ್ ಪಕ್ಷಾಂತರದ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ(ಉದ್ಧವ್ ಬಣ)ಯ ಮುಖ್ಯಸ್ಥ ಉದ್ಧವ್ ಠಾಕ್ರೆ, "ಅವರು ನಿನ್ನೆಯವರೆಗೂ ಸ್ಥಾನ ಹಂಚಿಕೆ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು. ಆದರೀಗ ದಿಢೀರನೆ ಪಕ್ಷಾಂತರ ಮಾಡಿದ್ದಾರೆ. ಬಹುಶಃ ಅವರು ರಾಜ್ಯಸಭಾ ಸ್ಥಾನಕ್ಕಾಗಿ ಹೋಗಿರಬಹದು. ಬಹುಶಃ ಎಲ್ಲರೂ ತಮ್ಮ ಕುರಿತು ಮಾತ್ರ ಯೋಚಿಸುತ್ತಿರುವಂತೆ ತೋರುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಹುಶಃ ಅವರೀಗ ಉದ್ಧವ್ ಠಾಕ್ರೆ ಮಾತನಾಡುತ್ತಿರುವ ರಾಜ್ಯಸಭೆ ಟಿಕೆಟ್ ಮೂಲಕ ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಮಾಡಬಹುದು.
ಸೌಜನ್ಯ: indiatoday.in