ಅಸ್ಸಾಮ್: ಸರಕಾರಿ ಗೋಮಾಳದಿಂದ 300 ಕುಟುಂಬಗಳ ತೆರವು

ಸಾಂದರ್ಭಿಕ ಚಿತ್ರ
ಗುವಾಹಟಿ: ಅಸ್ಸಾಮ್ ನ ನಲ್ಬಾರಿ ಜಿಲ್ಲೆಯ ಗ್ರಾಮವೊಂದರಲ್ಲಿರುವ 82 ಬಿಘ ಸಾರ್ವಜನಿಕ ಗೋಮಾಳದಿಂದ ಅಕ್ರಮ ನಿವಾಸಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಅಸ್ಸಾಮ್ ಸರಕಾರ ಸೋಮವಾರ ಆರಂಭಿಸಿದೆ.
ಬಾಕ್ರಿಕುಚಿ ಗ್ರಾಮದ ಗೋಮಾಳದಿಂದ ಜನರನ್ನು ಒಕ್ಕಲೆಬ್ಬಿಸುವ ಕಾರ್ಯಾಚರಣೆಯು ಬಿಗಿ ಭದ್ರತೆಯ ನಡುವೆ ಸೋಮವಾರ ಮುಂಜಾನೆ ಆರಂಭಗೊಂಡಿತು. ಯಾವುದೇ ಅನಪೇಕ್ಷಿತ ಘಟನೆ ನಡೆದಿಲ್ಲ ಎಂದು ಜಿಲ್ಲಾಧಿಕಾರಿ ನಿಬೇದನ್ ದಾಸ್ ಪಟೊವರಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಸ್ಥಳವನ್ನು ತೆರವುಗೊಳಿಸುವಂತೆ ಅತಿಕ್ರಮಣಕಾರರಿಗೆ ಜೂನ್ 3ರಂದು ನೋಟಿಸ್ ನೀಡಲಾಗಿತ್ತು. ಅದನ್ನು ಪ್ರಶ್ನಿಸಿ ಅಲ್ಲಿನ ನಿವಾಸಿಗಳು ಗೌಹಾಟಿ ಹೈಕೋರ್ಟ್ಗೆ ಹೋದರು. ಆದರೆ, ರಾಜ್ಯಾದ್ಯಂತವಿರುವ ಎಲ್ಲಾ ಸರಕಾರಿ ಗೋಮಾಳಗಳನ್ನು ಅತ್ರಿಕ್ರಮಣಕಾರರಿಂದ ಮುಕ್ತಗೊಳಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿತು.
ಸರಕಾರಿ ಗೋಮಾಳದಲ್ಲಿ ಸುಮಾರು 300 ಕುಟುಂಬಗಳು ನೆಲೆಸಿದ್ದವು.
ಸುಮಾರು 500 ಭದ್ರತಾ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಸಂಭಾವ್ಯ ಅನಪೇಕ್ಷಿತ ಘಟನೆಗಳನ್ನು ತಡೆಯಲು ಹೆಚ್ಚುವರಿ ಪಡೆಗಳನ್ನು ಸಿದ್ಧತೆಯಲ್ಲಿರಿಸಲಾಗಿತ್ತು.
ಒಟ್ಟು 452 ಬಿಘ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಆದರೆ, 82 ಬಿಘ ಜಮೀನಿನಲ್ಲಿ ಜನರು ಮನೆಗಳನ್ನು ನಿರ್ಮಿಸಿದ್ದಾರೆ. ಅವರು ಉಳಿದ ಜಮೀನನ್ನು ಮೀನುಗಾರಿಕೆ ಮತ್ತು ಕೃಷಿಗೆ ಬಳಸುತ್ತಿದ್ದಾರೆ ಎಂದು ವರದಿಯೊಂದರಲ್ಲಿ ಹೇಳಲಾಗಿದೆ. ಗ್ರಾಮದಲ್ಲಿ ಶಾಲೆಗಳು, ಮಸೀದಿಗಳು ಮತ್ತು ಅಂಗನವಾಡಿ ಕೇಂದ್ರಗಳೂ ಇವೆ.







