ಅಸ್ಸಾಂ| ಶಾಲೆಯಲ್ಲಿ ಕ್ರಿಸ್ಮಸ್ ಅಲಂಕಾರ ಧ್ವಂಸ ಆರೋಪ : ವಿಎಚ್ಪಿ, ಬಜರಂಗದಳದ ನಾಲ್ವರು ಕಾರ್ಯಕರ್ತರ ಬಂಧನ

Photo Credit : ANI \ @zoo_bear
ಗುವಾಹಟಿ, ಡಿ. 26: ಅಸ್ಸಾಂನ ನಲ್ಬರಿ ಜಿಲ್ಲೆಯ ಸಂತ ಮೇರಿ ಶಾಲೆಯಲ್ಲಿ ಕ್ರಿಸ್ಮಸ್ ಅಲಂಕಾರಗಳನ್ನು ಧ್ವಂಸಗೊಳಿಸಿದ ಆರೋಪದಲ್ಲಿ ವಿಶ್ವ ಹಿಂದೂ ಪರಿಷದ್ (ವಿಎಚ್ಪಿ)ನ ಮೂವರು ಹಾಗೂ ಬಜರಂಗ ದಳದ ಒಬ್ಬರು ಕಾರ್ಯಕರ್ತರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಈ ಘಟನೆ ನಲ್ಬರಿಯಲ್ಲಿ ಬುಧವಾರ ನಡೆದಿದೆ. ಸಂಘಪರಿವಾರದ ಗುಂಪು ಇಲ್ಲಿನ ಶಾಲೆಯ ಕ್ಯಾಂಪಸ್ಗೆ ನುಗ್ಗಿ ಬ್ಯಾನರ್ ಹಾಗೂ ಪೋಸ್ಟರ್ಗಳನ್ನು ಹರಿದು ಹಾಕಿದೆ ಹಾಗೂ ಬೆಂಕಿ ಹಚ್ಚಿದೆ. ಸಮೀಪದ ಬೀದಿಯಲ್ಲಿ ಮಾರಾಟ ಮಾಡುತ್ತಿದ್ದ ಕ್ರಿಸ್ಮಸ್ ಅಲಂಕಾರಿಕ ವಸ್ತುಗಳನ್ನು ನಾಶ ಮಾಡಿದೆ.
ದಾಂಧಲೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಿರುವುದನ್ನು ನಲ್ಬರಿಯ ಎಸ್ಎಸ್ಪಿ ಬಿಬೇಕಾನಂದ ದಾಸ್ ದೃಢಪಡಿಸಿದ್ದಾರೆ. ‘‘ನಾವು ಮೊದಲೇ ಮೂವರನ್ನು ಗುರುತಿಸಿದ್ದೆವು. ಆದರೆ, ಗುಂಪು ದೊಡ್ಡದಾಗಿತ್ತು. ಎಲ್ಲರೂ ನಲ್ಬರಿ ಜಿಲ್ಲೆಯ ಸ್ಥಳೀಯರು’’ ಎಂದು ದಾಸ್ ಹೇಳಿದ್ದಾರೆ.
ಶಾಲೆಯ ಪ್ರಾಂಶುಪಾಲ ಫಾದರ್ ಬೈಜು ಸೆಬಾಸ್ಟಿಯನ್ ಬೆಲ್ಸೋರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ಬಳಿಕ ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಬುಧವಾರ ಅಪರಾಹ್ನ ಸುಮಾರು 2.30ಕ್ಕೆ ಅಪರಿಚಿತ ದುಷ್ಕರ್ಮಿಗಳು ಶಾಲೆಯ ಆವರಣ ಪ್ರವೇಶಿಸಿದರು. ಅಲಂಕಾರ, ಲೈಟ್, ಗಿಡದ ಕುಂಡ ಹಾಗೂ ಇತರ ವಸ್ತುಗಳಿಗೆ ಹಾನಿ ಉಂಟು ಮಾಡಿದರು. ಗೊದಲಿಗೆ ಬೆಂಕಿ ಹಚ್ಚಿದರು ಎಂದು ಸೆಬಾಸ್ಟಿಯನ್ ದೂರಿನಲ್ಲಿ ಆರೋಪಿಸಿದ್ದಾರೆ.
ಬಂಧಿತರದಲ್ಲಿ ವಿಎಚ್ಪಿಯ ನಲ್ಬರಿ ಜಿಲ್ಲಾ ಕಾರ್ಯದರ್ಶಿ ಭಾಸ್ಕರ್ ದೇಕಾ (34), ವಿಎಚ್ಪಿಯ ಉಪಾಧ್ಯಕ್ಷರಾದ ಮಾನಸ್ ಜ್ಯೋತಿ ಪಟ್ಗಿರಿ (32), ವಿಎಚ್ಪಿಯ ಸಹಾಯಕ ಕಾರ್ಯದರ್ಶಿ ಬಿಜು ದತ್ತಾ (34), ನಲ್ಬರಿ ಬಜರಂಗದಳದ ಜಿಲ್ಲಾ ಸಂಚಾಲಕರಾದ ನಯನ್ ತೆಂಡೂಲ್ಕರ್(34) ಸೇರಿದ್ದಾರೆ.
ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)ಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಕ್ರಿಮಿನಲ್ ಅತಿಕ್ರಮಣ, ದುಷ್ಕೃತ್ಯ, ಕ್ರಿಮಿನಲ್ ಬೆದರಿಗೆ ಹಾಗೂ ಕ್ರಿಮಿನಲ್ ಪಿತೂರಿಯ ಪ್ರಕರಣಗಳನ್ನು ದಾಖಲಿಸಲಾಗಿದೆ.







