ಅಸ್ಸಾಂ: ಟ್ಯೂಶನ್ ಮುಗಿಸಿ ಮನೆಗೆ ಮರಳುತ್ತಿದ್ದ ಬಾಲಕಿಯ ಸಾಮೂಹಿಕ ಅತ್ಯಾಚಾರ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಟ್ಯೂಶನ್ ತರಗತಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಅಸ್ಸಾಂನ ನೌಗಾಂವ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ದಿಂಘ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರಕ್ಕೊಳಗಾದ ಬಾಲಕಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಬಿದ್ದಿರುವುದನ್ನು ಕಂಡ ಸ್ಥಳೀಯ ನಿವಾಸಿಗಳು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಪ್ರಶ್ನಿಸುತ್ತಿದ್ದಾರೆ.
ಪ್ರಕರಣದ ತನಿಖೆ ನಡೆಯುತ್ತಿದ್ದು, ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ ಎಂದು ನಾಗಾಂವ್ ಜಿಲ್ಲೆಯ ಪೊಲೀಸ್ ಆಧೀಕ್ಷಕ ಸ್ವಪ್ನೀಲ್ ಡೆಕಾ ತಿಳಿಸಿದ್ದಾರೆ.
ಬಾಲಕಿಯ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ದಿಂಗ್ನಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದು, ಹಲವಾರು ಸಂಘಸಂಸ್ಥೆಗಳು ಬಂದ್ಗೆ ಕರೆ ನೀಡಿದವು.. ಈ ಹೇಯ ಕೃತ್ಯವನ್ನು ಎಸಗಿದವರ ವಿರುದ್ಥ ಕಠಿಣ ಶಿಕ್ಸೆ ನೀಡಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವ ಶರ್ಮಾ ಅವರು ಘಟನೆಯನ್ನು ಖಂಡಿಸಿದ್ದು, ಮಾನವೀಯತೆಯ ವಿರುದ್ಧ ಎಸಗಿದ ಅಪರಾಧ ಇದಾಗಿದೆಯೆಂದು ಹೇಳಿದ್ದಾರೆ. ಈ ಅಪರಾಧದಲ್ಲಿ ಶಾಮೀಲಾದ ಯಾರನ್ನೂ ಬಿಡಲಾಗುವುದಿಲ್ಲ ಹಾಗೂ ಅವರಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುವುದೆಂದು ಹೇಳಿದ್ದಾರೆ.







