ಅಸ್ಸಾಂ: ನಿವೃತ್ತ ಸೇನಾ ಅಧಿಕಾರಿಗೆ ಮತಹಕ್ಕು ನಿರಾಕರಣೆ, ಮೃತ ಎಂದು ಘೋಷಿಸಿದ ಅಧಿಕಾರಿಗಳು!

ನೀರೇಶ್ ರಂಜನ್ ಭಟ್ಟಾಚಾರ್ಜೀ | PC : hindustantimes.com
ಸಿಲ್ಚೇರ್: ಪಾಕಿಸ್ತಾನ ವಿರುದ್ಧ ಎರಡು ಯುದ್ಧಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ನೀರೇಶ್ ರಂಜನ್ ಭಟ್ಟಾಚಾರ್ಜೀ ಅವರಿಗೆ ಮತದಾನದ ಹಕ್ಕು ನಿರಾಕರಿಸಿದ ವಿಚಿತ್ರ ಪ್ರಸಂಗ ವರದಿಯಾಗಿದೆ. ಚುನಾವಣಾ ಅಧಿಕಾರಿಗಳು ಅವರಿಗೆ ನೀಡಿದ ಚೀಟಿಯಲ್ಲಿ ಅವರ ಹೆಸರು ಪಟ್ಟಿಯಿಂದ ಕಿತ್ತುಹಾಕಲ್ಪಟ್ಟವರ ವಿಭಾಗದಲ್ಲಿ ಸೇರಿದೆ.
86 ವರ್ಷ ವಯಸ್ಸಿನ ನೀರೇಶ್ ರಂಜನ್ ಅವರು ಈ ಕಾರಣದಿಂದ ಮತ ಹಕ್ಕಿನಿಂದ ವಂಚಿತರಾಗಿದ್ದಾರೆ. ದಾಖಲೆಗಳ ಪ್ರಕಾರ, ರಂಜ್ ಮೃತಪಟ್ಟಿದ್ದಾರೆ ಎನ್ನುವುದು ಅಧಿಕಾರಿಗಳು ನೀಡುವ ಸಬೂಬು. "ನನ್ನ ಹೆಸರು ಕಿತ್ತುಹಾಕಲ್ಪಟ್ಟ ಮತದಾರರ ಪಟ್ಟಿಯಲ್ಲಿದ್ದು, 'ಇ' ಮಾರ್ಕ್ ಮಾಡಲಾಗಿದೆ ಎಂದು ರಂಜನ್ ಹೇಳುತ್ತಾರೆ. ಏಪ್ರಿಲ್ 26ರಂದು ನಡೆದ ಎರಡನೇ ಹಂತದ ಮತದಾನದಲ್ಲಿ ಅವರು ಮತ ಚಲಾಯಿಸಬೇಕಿತ್ತು.
ಏಪ್ರಿಲ್ 24ರಂದು ಚುನಾವಣಾ ಅಧಿಕಾರಿಗಳು ಮತದಾರರ ಗುರುತಿನ ಚೀಟಿಯೊಂದಿಗೆ ಮನೆಗೆ ಬಂದರು. ಆ ಪಟ್ಟಿನಲಿ ನನ್ನ ಹೆಸರಿನ ಮುಂದೆ ಇ ಎಂದು ನಮೂದಿಸಲಾಗಿತ್ತು. ಇ- ಎಂದರೆ ನಾನು ಮೃತಪಟ್ಟಿದ್ದೇನೆ ಎಂಬ ಅರ್ಥ. ಆದರೆ ನಾನು ಜೀವಂತ ಇದ್ದೇನೆ. ನಾನು ಗುರುತಿನ ಚೀಟಿ ಪಡೆದು 26ರಲ್ಲಿ ಮತ ಚಲಾಯಿಸಲು ಉತ್ಸುಕನಾಗಿದ್ದೆ. ಆದರೆ ಆ ಅವಕಾಶ ನಿರಾಕರಿಸಲಾಯಿತು" ಎಂದು ಭಟ್ಟಾಚಾರ್ಜೀ ಹೇಳಿದ್ದಾರೆ.
ಮತ ನಿರಾಕರಿಸಿದಾಗ ಈ ಬಗ್ಗೆ ಲಿಖಿತವಾಗಿ ವಿವರಣೆ ನೀಡುವಂತೆ ಅಧಿಕಾರಿಗಳನ್ನು ಕೇಳಿದೆ. ಅಧಿಕಾರಿಗಳು ಬರಹ ರೂಪದಲ್ಲಿ ಮತ ನಿರಾಕರಿಸಿರುವ ಪತ್ರ ನೀಡಿದ್ದಕ್ಕೆ ದಾಖಲೆ ಇದೆ ಎಂದು ವಿವರಿಸಿದ್ದಾರೆ.







