ಆರು ಸಮುದಾಯಗಳಿಗೆ ಎಸ್ಟಿ ಸ್ಥಾನಮಾನ ನೀಡುವ ವರದಿಗೆ ಅಸ್ಸಾಂ ಸಂಪುಟ ಅನುಮೋದನೆ

Photo | PTI
ಗುವಾಹಟಿ : ಅಸ್ಸಾಂ ರಾಜ್ಯದ ಆರು ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ಕುರಿತ ವರದಿಗೆ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಚೂತಿಯಾ, ಕೊಚ್-ರಾಜ್ಬೊಂಗ್ಷಿ, ಮತಕ್, ಮೊರಾನ್ ಹಾಗೂ ಟಹಿ ಅಹೋಮ್ ಹಾಗೂ ಟೀ ಟ್ರೈಬ್ಸ್ (ಆದಿವಾಸಿಗಳು) ಈ ಸ್ಥಾನಮಾನ ಪಡೆದ ಆರು ಸಮುದಾಯಗಳು.
"ಶಿಕ್ಷಣ ಸಚಿವ ರನೋಜ್ ಪೆಗು, ಮಾಹಿತಿ ತಂತ್ರಜ್ಞಾನ ಸಚಿವ ಕೇಶಬ್ ಮಹಂತಾ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಪಿಜೂಷ್ ಹಝಾರಿಕಾ ಅವರನ್ನೊಳಗೊಂಡ ಸಮಿತಿಯ ವರದಿಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ ಬಳಿಕ ಅದನ್ನು ಮುಂದಿನ ಕ್ರಮಕ್ಕಾಗಿ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ರವಾನಿಸಲಾಗುತ್ತದೆ” ಎಂದು ಬುಧವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.
ಐದು ದಿನಗಳ ಚಳಿಗಾಲದ ಅಧಿವೇಶನ ನವೆಂಬರ್ 29ರಂದು ಮುಕ್ತಾಯಗೊಳ್ಳಲಿದೆ. ಕಳೆದ ಒಂದು ತಿಂಗಳಿನಿಂದ ಪರಿಶಿಷ್ಟ ಬುಡಕಟ್ಟು ಸ್ಥಾನಮಾನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ ಈ ಆರು ಸಮುದಾಯಗಳ ಸುದೀರ್ಘ ಕಾಲದ ಬೇಡಿಕೆಯನ್ನು ಸಚಿವ ಸಂಪುಟ ಅನುಮೋದಿಸಿರುವುದು ಮಹತ್ವದ ನಡೆ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.





