ಅಸ್ಸಾಂ ಮುಖ್ಯಮಂತ್ರಿ ‘ಅಗ್ಗದ ಜನಪ್ರಿಯತೆ’ಗೆ ಮುಂದಾಗಿದ್ದಾರೆ: ತೇಜಸ್ವಿ ಯಾದವ್

ತೇಜಸ್ವಿ ಯಾದವ್ , ಹಿಮಂತ ಬಿಸ್ವ ಶರ್ಮ | PC : PTI
ಪಾಟ್ನ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ‘‘ಅಗ್ಗದ ಜನಪ್ರಿಯತೆ’’ಯನ್ನು ಪಡೆಯಲು ಮುಂದಾಗಿದ್ದಾರೆ ಎಂದು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳ ನಾಯಕ ತೇಜಸ್ವಿ ಯಾದವ್ ಶುಕ್ರವಾರ ಆರೋಪಿಸಿದ್ದಾರೆ. ಮುಸ್ಲಿಂ ಶಾಸಕರಿಗೆ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗುವಂತೆ ಶುಕ್ರವಾರಗಳಂದು ನೀಡಲಾಗುವ ಎರಡು ಗಂಟೆಗಳ ವಿರಾಮವನ್ನು ಅಸ್ಸಾಂ ವಿಧಾನಸಭೆ ರದ್ದುಪಡಿಸಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
‘‘ಅಸ್ಸಾಂ ಮುಖ್ಯಮಂತ್ರಿ ಇದನ್ನು ಅಗ್ಗದ ಜನಪ್ರಿಯತೆಗಾಗಿ ಮಾಡುತ್ತಿದ್ದಾರೆ. ಅವರು ಯಾರು? ಅವರಿಗೆ ಅಗ್ಗದ ಜನಪ್ರಿಯತೆ ಬೇಕು, ಅಷ್ಟೆ. ಬಿಜೆಪಿಯು ಮುಸ್ಲಿಮರನ್ನು ಮೃದು ಗುರಿಯನ್ನಾಗಿ ಮಾಡಿಕೊಂಡಿದೆ’’ ಎಂದು ಪಾಟ್ನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಯಾದವ್ ಹೇಳಿದರು.
ಶುಕ್ರವಾರಗಳಂದು ಎರಡು ಗಂಟೆಗಳ ವಿರಾಮವನ್ನು ನೀಡುವ ಬ್ರಿಟಿಶ್ ಕಾಲದ ಸಂಪ್ರದಾಯವನ್ನು ಅಸ್ಸಾಂ ವಿಧಾನಸಭೆ ಶುಕ್ರವಾರ ರದ್ದುಪಡಿಸಿದೆ. ಅದನ್ನು ಹಿಂದಿನಿಂದಲೂ ಮುಸ್ಲಿಂ ಶಾಸಕರು ಜುಮಾ ಪ್ರಾರ್ಥನೆ ಸಲ್ಲಿಸಲು ಬಳಸುತ್ತಿದ್ದರು.





