ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಿದ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ
Photo: PTI
ಗುವಾಹಟಿ: ಭಾರತ್ ಜೋಡೊ ನ್ಯಾಯ ಯಾತ್ರೆಯ ಭಾಗವಾಗಿ ಗುವಾಹಟಿ ನಗರವನ್ನು ಪ್ರವೇಶಿಸಲು ಕಾಂಗ್ರೆಸ್ ಕಾರ್ಯಕರ್ತರಿಗೆ ತಡೆ ಒಡ್ಡಿರುವ ಬೆನ್ನಿಗೇ, ಜನರ ಗುಂಪನ್ನು ಪ್ರಚೋದಿಸುತ್ತಿರುವ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಪೊಲೀಸರಿಗೆ ಸೂಚಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಇಂದು ಅಸ್ಸಾಂನಲ್ಲಿ ತನ್ನ ಮಹತ್ವಾಕಾಂಕ್ಷಿ ಭಾರತ್ ಜೋಡೊ ನ್ಯಾಯ ಯಾತ್ರೆಗೆ ಮರು ಚಾಲನೆ ನೀಡಿದ ನಂತರ, ಗುವಾಹಟಿ ನಗರವನ್ನು ಪ್ರವೇಶಿಸಲು ಯತ್ನಿಸಿದ ರಾಹುಲ್ ಗಾಂಧಿ ಹಾಗೂ ಸುಮಾರು 5,000 ಕಾಂಗ್ರೆಸ್ ಕಾರ್ಯಕರ್ತರಿಗೆ ಪೊಲೀಸರು ತಡೆ ಒಡ್ಡಿದ್ದಾರೆ. ಇದರ ಬೆನ್ನಿಗೇ ಪೊಲೀಸರೊಂದಿಗೆ ಘರ್ಷಣೆಗಿಳಿದ ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸ್ ತಡೆಗೋಡೆಗಳನ್ನು ಕಿತ್ತೆಸೆದಿದ್ದಾರೆ. ಹೀಗಾಗಿ ಜನರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಇದಕ್ಕೂ ಮುನ್ನ, ಗುವಾಹಟಿಯ ಗಡಿಯಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಪಕ್ಷದ ಕಾರ್ಯಕರ್ತರು ನಿಯಮಗಳನ್ನು ಮುರಿಯುವುದಿಲ್ಲ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವುದಿಲ್ಲ. ಹಾಗೆಂದು ನಾವು ದುರ್ಬಲರು ಎಂದು ಅರ್ಥವಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಈ ಹೇಳಿಕೆಯ ಬೆನ್ನಿಗೇ, ಜನರ ಗುಂಪನ್ನು ಪ್ರಚೋದಿಸಿರುವ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಪೊಲೀಸರಿಗೆ ಸೂಚನೆ ನೀಡಿದ್ದಾರೆ.