ಜಿಗ್ನೇಶ್ ಮೇವಾನಿ ವಿರುದ್ಧದ ಎರಡು ಆರೋಪಗಳನ್ನು ಕೈಬಿಟ್ಟ ಅಸ್ಸಾಂ ನ್ಯಾಯಾಲಯ
ಜಿಗ್ನೇಶ್ ಮೇವಾನಿ | Photo: PTI
ಗುವಾಹಟಿ: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ ದಾಖಲಾದ ಪ್ರಕರಣದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಹಾಗೂ ಅವರ ಬಗ್ಗೆ ಅಶ್ಲೀಲ ಪದ ಬಳಸಿದ ಆರೋಪವನ್ನು ಅಸ್ಸಾಂ ಬಾರ್ಪೇಟಾ ಜಿಲ್ಲೆಯ ನ್ಯಾಯಾಲಯ ಕೈಬಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಕುರಿತು ಮಾಡಿದ ಟ್ವೀಟ್ ನ ಹಿನ್ನೆಲೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಮೇವಾನಿ ಅವರನ್ನು ಮೊದಲ ಬಾರಿ ಗುಜರಾತ್ ನ ಪಾಲನ್ಪುರದಿಂದ ಎಪ್ರಿಲ್ 19ರಂದು ಬಂಧಿಸಲಾಗಿತ್ತು ಹಾಗೂ ಪ್ರಕರಣ ದಾಖಲಾಗಿದ್ದ ಕೊಕ್ರಝಾರ್ಗೆ ಕರೆ ತರಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮಾ ಗಾಂಧಿ ಅವರನ್ನು ಹತ್ಯೆಗೈದ ನಾಥುರಾಂ ಗೋಡ್ಸೆ ಅವರನ್ನು ಆರಾಧಿಸುತ್ತಿದ್ದಾರೆ ಎಂದು ಮೇವಾನಿ ಅವರು ಟ್ವೀಟ್ ಮಾಡಿದ್ದರು. ಈ ಪ್ರಕರಣದಲ್ಲಿ ಅವರಿಗೆ ಎಪ್ರಿಲ್ 25ರಂದು ನ್ಯಾಯಾಲಯ ಜಾಮೀನು ನೀಡಿತ್ತು.
ಮೇವಾನಿ ಅವರನ್ನು ಬಂಧನದಲ್ಲಿ ಇರಿಸಲು ಯಾವುದೇ ಸಮಂಜಸ ಕಾರಣ ಇಲ್ಲ ಎಂದು ನ್ಯಾಯಾಲಯ ಹೇಳಿತ್ತು. ಆದರೆ, ಅನಂತರ ದೇಬಿಕಾ ಬ್ರಹ್ಮ ಎಂಬ ಮಹಿಳಾ ಪೊಲೀಸ್ ಅಧಿಕಾರಿಯೋರ್ವರು ದಾಖಲಿಸಿದ ದೂರಿನ ಆಧಾರದಲ್ಲಿ ಮತ್ತೆ ಬಂಧಿಸಲಾಗಿತ್ತು.
ಮೇವಾನಿ ಅವರನ್ನು ಗುವಾಹಟಿ ವಿಮಾನ ನಿಲ್ದಾಣದಿಂದ ಕೊಕ್ರಝಾರ್ ಜಿಲ್ಲೆಗೆ ಕರೆದೊಯ್ಯುತಿದ್ದ ಸಂದರ್ಭ ಅವರು ಅಶ್ಲೀಲ ಪದ ಬಳಸಿದ್ದಾರೆ ಹಾಗೂ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದರು.