ಝುಬೀನ್ ಗರ್ಗ್ ಪ್ರಕರಣ : ತನಿಖೆಗೆ ಅಸ್ಸಾಂ ಸರಕಾರದಿಂದ ನ್ಯಾಯಾಂಗ ಆಯೋಗ ರಚನೆ

File photo| EPS
ಗುವಾಹಟಿ, ಅ. 4: ಗಾಯಕ ಹಾಗೂ ಸಂಗೀತ ಸಂಯೋಜಕ ಝುಬೀನ್ ಗರ್ಗ್ ಸಾವಿನ ಕುರಿತು ತನಿಖೆಗೆ ಅಸ್ಸಾಂ ಸರಕಾರ ಏಕ ವ್ಯಕ್ತಿ ನ್ಯಾಯಾಂಗ ಆಯೋಗವನ್ನು ರಚಿಸಿದೆ ಎಂದು ಅಧಿಕೃತ ಆದೇಶ ತಿಳಿಸಿದೆ.
ಗುವಾಹಟಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸೌಮಿತ್ರಾ ಸೈಕಿಯಾ ನೇತೃತ್ವದ ಆಯೋಗ 6 ತಿಂಗಳ ಒಳಗೆ ವರದಿ ಸಲ್ಲಿಸಲಿದೆ ಎಂದು ರಾಜಕೀಯ ಇಲಾಖೆ ಬಿಡುಗಡೆ ಮಾಡಿದ ಆದೇಶ ಹೇಳಿದೆ.
ಮುಖ್ಯಮಂತ್ರಿ ಕಚೇರಿ ‘ಎಕ್ಸ್’ನಲ್ಲಿ ಈ ಆದೇಶವನ್ನು ಶುಕ್ರವಾರ ಹಂಚಿಕೊಂಡಿದೆ. ಸಿಂಗಾಪುರದಲ್ಲಿ ಸೆಪ್ಟಂಬರ್ 19ರಂದು ಗರ್ಗ್ ಮೃತಪಡಲು ಕಾರಣವಾದ ‘‘ಸಂಗತಿ ಹಾಗೂ ಸಂದರ್ಭ’’ದ ಕುರಿತು ಆಯೋಗ ತನಿಖೆ ನಡೆಸಲಿದೆ ಎಂದು ಅದು ಹೇಳಿದೆ.
ಜನಪ್ರಿಯ ಗಾಯಕನ ಸಾವಿಗೆ ಸಂಬಂಧಿಸಿ ಯಾವುದೇ ವ್ಯಕ್ತಿ, ಪ್ರಾಧಿಕಾರ ಅಥವಾ ಸಂಸ್ಥೆಗಳ ವೈಫಲ್ಯತೆ, ನಿರ್ಲಕ್ಷ್ಯ, ಯಾವುದೇ ಲೋಪದೋಷಗಳು ಇದ್ದರೆ, ಏಕ ಸದಸ್ಯ ಆಯೋಗ ತನಿಖೆ ನಡೆಸಲಿದೆ ಎಂದು ಅಧಿಸೂಚನೆ ತಿಳಿಸಿದೆ.
Next Story





