ಸುಮಾರು 3,600 ಎಕರೆ ವಿಸ್ತೀರ್ಣದ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಗೆ ಅಸ್ಸಾಂ ಸರಕಾರ ಚಾಲನೆ

PC : PTI
ಗೋಲಾಘಾಟ್: ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಸುಮಾರು 3,600 ಎಕರೆಗೂ ಹೆಚ್ಚು ವಿಸ್ತೀರ್ಣದ ಅರಣ್ಯ ಭೂಮಿಯ ಒತ್ತುವರಿ ತೆರವಿನ ಬೃಹತ್ ಕಾರ್ಯಾಚರಣೆಗೆ ಮಂಗಳವಾರ ಅಸ್ಸಾಂ ಸರಕಾರ ಚಾಲನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರಕಾರದ ಈ ನಡೆಯಿಂದ ಸುಮಾರು 1,500 ಕುಟುಂಬಗಳ ಮೇಲೆ ಪರಿಣಾಮವುಂಟಾಗಲಿದೆ ಎಂದೂ ಅವರು ಹೇಳಿದ್ದಾರೆ.
ಅಸ್ಸಾಂ-ನಾಗಾಲ್ಯಾಂಡ್ ಗಡಿ ಭಾಗದ ಸರುಪತರ್ ಉಪ ವಿಭಾಗದೊಂದಿಗೆ ಉರಿಯಾಮ್ ಘಾಟ್ ನ ರೆಂಗ್ಮಾ ಮೀಸಲು ಅರಣ್ಯದ ಸುಮಾರು 11,000 ಬಿಗಾ (3,600 ಎಕರೆಗೂ ಹೆಚ್ಚು) ಭೂಮಿಯ ತೆರವಿಗೆ ಇಂದು ಮುಂಜಾನೆಯಿಂದ ಚಾಲನೆ ನೀಡಲಾಗಿದೆ ಎಂದು ಗೋಲಾಘಾಟ್ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯ ವಿವಿಧ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
“ಬಿದ್ಯಾಪುರ್ ಪ್ರದೇಶದ ಮಖ್ಯ ಮಾರುಕಟ್ಟೆಯಿಂದ ಈ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ನಾವು ಹಂತಹಂತವಾಗಿ ವಸತಿ ಪ್ರದೇಶಗಳಿಗೆ ಮುನ್ನಡೆಯಲಿದ್ದು, ಅಕ್ರಮ ವಸತಿ ಕಟ್ಟಡಗಳನ್ನು ನೆಲಸಮಗೊಳಿಸಲಿದ್ದೇವೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಜನರಿಂದ ಸುಮಾರು 10,500ರಿಂದ 11,000 ಬಿಗಾ ವಿಸ್ತೀರ್ಣದಷ್ಟು ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ, ಈ ಕಾರ್ಯಾಚರಣೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಥಳೀಯರು, “ಮುಸ್ಲಿಂ ಸಮುದಾಯ ಹಾಗೂ ಎಫ್ಆರ್ಸಿ ಪ್ರಮಾಣ ಪತ್ರ ಹೊಂದಿರುವ ಬೋಡೊ, ನೇಪಾಳಿ ಮತ್ತು ಇನ್ನಿತರ ಸಮುದಾಯಗಳ ಜನರ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ” ಎಂದು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, “ಸುಮಾರು ಶೇ. 80ರಷ್ಟು ಕುಟುಂಬಗಳು ನೋಟಿಸ್ ಸ್ವೀಕರಿಸಿದ ಬೆನ್ನಿಗೇ, ತಮ್ಮ ಅಕ್ರಮ ವಸತಿ ನೆಲೆಗಳನ್ನು ಕೆಲವೇ ದಿನಗಳಲ್ಲಿ ತೆರವುಗೊಳಿಸಿವೆ. ನಾವು ಅವರ ಮನೆಗಳನ್ನಷ್ಟೇ ನೆಲಸಮಗೊಳಿಸುತ್ತಿದ್ದೇವೆ” ಎಂದು ಸ್ಪಷ್ಟನೆ ನೀಡಿದ್ದಾರೆ.







