ಹಿಂದೂ ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ನಿಷೇಧಕ್ಕೆ ಅಸ್ಸಾಂ ಸಚಿವ ಕರೆ !

PC: facebook.com/TheAshokSinghal
ಗುವಾಹತಿ: ಅಸ್ಸಾಂ ಆರೋಗ್ಯ ಸಚಿವ ಅಶೋಕ್ ಸಿಂಘಾಲ್ 'ಮಿಯಾಗಳ' ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪ ವಿಧಾನಸಭೆಯಲ್ಲಿ ಮಂಗಳವಾರ ಕೋಲಾಹಲಕ್ಕೆ ಕಾರಣವಾಯಿತು. ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ ಪಕ್ಷದ ಸದಸ್ಯರು ಸಚಿವರ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಆಗ್ರಹಿಸಿದರು. ಬಿಜೆಪಿ ಸಚಿವ ಕೋಮು ವಿಭಜನೆ ಮತ್ತು ದ್ವೇಷಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಎಐಯುಡಿಎಫ್ ಆಪಾದಿಸಿದೆ.
ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಬಾಂಗ್ಲಾದೇಶದಿಂದ ವಲಸೆ ಬಂದ ಮುಸ್ಲಿಂ ವ್ಯಕ್ತಿಗಳನ್ನು ಅವಹೇಳನಕಾರಿಯಾಗಿ ಮಿಯಾ ಎಂದು ಕರೆಯಲಾಗುತ್ತದೆ. ಈ ಸಮುದಾಯದ ಒಂದು ಕೋಟಿ ಮಂದಿ ರಾಜ್ಯದಲ್ಲಿದ್ದು, 1980ರ ದಶಕದಿಂದ ನಡೆಯುತ್ತಿರುವ ವಿದೇಶಿ ವಿರೋಧಿ ಪ್ರತಿಭಟನೆಯ ಕೇಂದ್ರಬಿಂದುವಾಗಿದೆ.
ಹಿಂದೂ ಉತ್ಸವಗಳ ವೇಳೆ ಮಿಯಾಗಳು ಅಂಗಡಿಗಳನ್ನು ಇಡಲು ಅವಕಾಶ ನೀಡಬಾರದು ಎಂದು ಅಶೋಕ್ ಸಿಂಘಾಲ್ ತಮ್ಮ ಕ್ಷೇತ್ರವಾದ ಧೇಕೈಜುಲಿಯಲ್ಲಿ ನಡೆದ ಸಭೆಯೊಂದರಲ್ಲಿ ಹೇಳಿದ್ದಾರೆ ಎಂಬ ಅಂಶ ವಿವಾದಕ್ಕೆ ಕಾರಣವಾಗಿತ್ತು.
ಮಿಯಾಗಳಿಗೆ ಯಾವುದೇ ಬೆಂಬಲ ಇಲ್ಲ ಎಂದು ಸಿಂಘಾಲ್ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಜನತೆಯ ಸಹಕಾರ ಅಗತ್ಯ ಎಂದು ಕೋರಿದ್ದರು. ಎರಡು ಸಮುದಾಯಗಳ ನಡುವೆ ಯಾವುದೇ ಸಂವಹನ ಕೂಡಾ ಇರಬಾರದು ಎಂದು ಅವರು ಸೂಚಿಸಿದ್ದರು. "ಮಿಯಾಗಳಿಗೆ ಅಂಗಡಿಗಳನ್ನು ನೀಡಬೇಡಿ. ನಮ್ಮ ಯುವಕರಿಗೆ ನೀಡಿ. ನಮ್ಮ ಹಬ್ಬಗಳಿಗೆ ಅವರು ಹೇಗೆ ಪ್ರವೇಶಿಸುತ್ತಾರೆ? ನಮ್ಮ ಯುವಕರು ಈದ್ ಗೆ ಪ್ರವೇಶಿಸುತ್ತಾರೆಯೇ? ನಾನು ಅವರ ಪರವಾಗಿಲ್ಲ. ಅವರೊಂದಿಗೆ ನೀವು ಸೇರಿದರೆ ನಾನು ನಿಮ್ಮ ಜತೆಗೆ ಇರುವುದಿಲ್ಲ" ಎಂದು ಹೇಳುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿತ್ತು.







