ಅಸ್ಸಾಂ ಪೊಲೀಸರಿಂದ ಮಹಿಳೆಯ ಅಕ್ರಮ ಗಡಿಪಾರು?: ಸುಪ್ರೀಂಕೋರ್ಟ್ ಮೆಟ್ಟಲೇರಿದ ಸಂತ್ರಸ್ತೆಯ ಪುತ್ರ

ಸುಪ್ರೀಂಕೋರ್ಟ್ | PTI
ಹೊಸದಿಲ್ಲಿ: ಬಾಂಗ್ಲಾದೇಶಕ್ಕೆ ಅಸ್ಸಾಂ ಸರಕಾರವು ರಹಸ್ಯವಾಗಿ ಗಡಿಪಾರುಗಳನ್ನು ಮಾಡುತ್ತಿದೆಯೆಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿರುವ ನಡುವೆಯೇ, 26 ವರ್ಷದ ಯುವಕನೊಬ್ಬ ತನ್ನ ತಾಯಿಯನ್ನು ಅಸ್ಸಾಂ ಪೊಲೀಸರು ಅಕ್ರಮವಾಗಿ ಬಂಧನದಲ್ಲಿರಿಸಿದ್ದಾರೆಂದು ಆರೋಪಿಸಿ ಸುಪ್ರೀಂಕೋರ್ಟ್ ಗೆ ದೂರು ನೀಡಿದ್ದಾರೆ. ಪ್ರಕರಣದ ಆಲಿಕೆಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಡೆಸಲಿದೆ. ಆಕೆಯನ್ನು ಬಾಂಗ್ಲಾಕ್ಕೆ ಗಡಿಪಾರು ಮಾಡಿರುವ ಸಾಧ್ಯತೆಯೂ ಇದೆಯೆಂದು ಆತ ಅರ್ಜಿಯಲ್ಲಿ ಶಂಕಿಸಿದ್ದಾನೆ.
ತನ್ನ ತಾಯಿ ಮೊನೊವಾರಾ ಬೆವಾ ಅವರನ್ನು ಕಾನೂನು ಬಾಹಿರವಾಗಿ ಬಂಧನದಲ್ಲಿಡಲಾಗಿದ್ದು, ಅವರನ್ನು ಹಾಜರುಪಡಿಸುವಂತೆ ಕೋರಿ ಯೂನುಸ್ ಅಲಿ ಎಂಬವರು ಸುಪೀರಂಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದರು.
ಅಸ್ಸಾಂನ ಅಧಿಕಾರಿಗಳು ಗಡಿ ಸಮೀಪ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು,ಯಾವುದೇ ಕಾನೂನು ಪ್ರಕ್ರಿಯೆ ನಡೆಸದೆಯೇ ಅವರನ್ನು ಗಡಿಪಾರು ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ತನ್ನ ತಾಯಿ ಮೊನೊವಾರಾ ಅವರನ್ನು ದುಭ್ರಿ ಪೊಲೀಸ್ ಠಾಣೆಗೆ ಆರಂಭದಲ್ಲಿ ವಿಚಾರಣೆಗಾಗಿ ಕರೆಯಿಸಲಾಗಿತ್ತು. ಆನಂತರ ಅವರು ಎಲ್ಲಿದ್ದಾರೆಂಬ ಮಾಹಿತಿಗಳು ತಿಳಿದುಬಂದಿಲ್ಲವೆಂದು ಯೂನಸ್ ಅಲಿ ಅರ್ಜಿಯಲ್ಲಿ ತಿಳಿಸಿದ್ದಾರೆ. ಮೇ 24ರಂದು ತಾನು ತಾಯಿಯನ್ನು ಕೊನೆಯಬಾರಿಗೆ ಕಂಡಿದ್ದು, ಈಗ ಆಕೆಯನ್ನು ಗಡಿಪಾರುಮಾಡಿರುವ ಶಂಕೆಯಿದೆ ಎಂದು ಆತ ಕಳವಳ ವ್ಯಕ್ತಪಡಿಸಿದ್ದಾರೆ.
ಮೊನೊವಾರಾ ಅವರನ್ನು ಅಕ್ರಮ ವಿದೇಶಿಯಳೆಂದು ಅಸ್ಸಾಂ ವಿದೇಶಿಯರ ನ್ಯಾಯಾಧೀಕರಣ ಈ ಮೊದಲು ಘೋಷಿಸಿತ್ತು ಹಾಗೂ ಆಕೆಯ ಗಡಿಪಾರಿಗೆ ಆಜ್ಞಾಪಿಸಿತ್ತು. ಈ ನಿರ್ಧಾರವನ್ನು ಗುವಾಹಟಿಯ ನ್ಯಾಯಾಲಯ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಮೊನೊವಾರಾ ಅವರು 2017ರಲ್ಲಿ ಸುಪ್ರೀಕೋರ್ಟ್ನಲ್ಲಿ ಪ್ರಶ್ನಿಸಿದ್ದು, ಅದರ ವಿಚಾರಣೆ ಬಾಕಿಯುಳಿದಿದೆ.
ಅಸ್ಸಾಂನ ವಿದೇಶಿಯರ ಬಂಧನ ಶಿಬಿರಗಳಲ್ಲಿ ಮೂರು ವರ್ಷಗಳಿಗೂ ಅಧಿಕ ಸಮಯವನ್ನು ಕಳೆದವರಿಗೆ ಶರ್ತಬದ್ಧ ಬಿಡುಗಡೆಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದ ಬಳಿಕ ಬೇವಾ ಅವರು 2019ರ ಡಿಸೆಂಬರ್ 19ರಂದು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.







