Assam | ಅಕ್ರಮ ವಲಸೆ ಕುರಿತ ತನಿಖಾ ಆಯೋಗದ ವರದಿ 41 ವರ್ಷ ಬಳಿಕ ಬಹಿರಂಗ!

PC: PTI
ಗುವಾಹತಿ: ಅಸ್ಸಾಂನಲ್ಲಿ 1983ರಲ್ಲಿ ನಡೆದ ನೆಲ್ಲೀ ಹತ್ಯಾಕಾಂಡ ಸೇರಿದಂತೆ ಹಲವು ಪ್ರಕ್ಷುಬ್ಧತೆಗಳಿಗೆ ಕಾರಣವಾಗಿದ್ದ ಅಕ್ರಮ ವಲಸೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಅಂದಿನ ಕಾಂಗ್ರೆಸ್ ಸರ್ಕಾರ ನೇಮಕ ಮಾಡಿದ್ದ ತ್ರಿಭುವನ ಪ್ರಸಾದ್ ತಿವಾರಿ ಸಮಿತಿಯ ವರದಿಯನ್ನು 41 ವರ್ಷ ಬಳಿಕ ಸರ್ಕಾರ ಬಹಿರಂಗಪಡಿಸಿದೆ.
ಅಸ್ಸಾಂನಲ್ಲಿ 1983ರ ಜನವರಿಯಿಂದ ಏಪ್ರಿಲ್ ವರೆಗೆ ನಡೆದ ಸರಣಿ ಹಿಂಸಾಚಾರ ಮತ್ತು ವಿದೇಶಿ ವಿರೋಧಿ ಚಳವಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಸರ್ಕಾರ ಈ ಸಮಿತಿಯನ್ನು ನೇಮಕ ಮಾಡಿತ್ತು. ಇದು ಅಕ್ರಮ ವಲಸೆ ತಡೆ, ಭೂಮಿ ವರ್ಗಾವಣೆ ಮೇಲೆ ನಿರ್ಬಂಧ, ಅಕ್ರಮ ನುಸುಳುಕೋರರನ್ನು ಒಕ್ಕಲೆಬ್ಬಿಸುವುದು, ಅಸ್ಸಾಮಿ ಗುರುತಿಸುವಿಕೆಯನ್ನು ರಕ್ಷಿಸುವುದು ಸೇರಿದಂತೆ ಹಲವು ಶಿಫಾರಸ್ಸುಗಳನ್ನು ಈ ಆಯೋಗ ಮಾಡಿತ್ತು.
ಈ ಆಯೋಗದ ವರದಿಯನ್ನು 1987ರಲ್ಲಿ ಮೊದಲ ಎಜಿಪಿ ಸರ್ಕಾರ ಸದನದಲ್ಲಿ ಮಂಡಿಸಿತ್ತು. ಆದರೆ ಇದರಲ್ಲಿ ಯಾವೆಲ್ಲ ಅಂಶಗಳು ಇವೆ ಎನ್ನುವುದು ಬಹಿರಂಗವಾಗಿರಲಿಲ್ಲ ಮತ್ತು ಇದರ ಅನುಷ್ಠಾನದ ಬಗ್ಗೆ ಯಾವ ಚರ್ಚೆಯೂ ನಡೆದಿರಲಿಲ್ಲ. ಇದೀಗ 41 ವರ್ಷ ಬಳಿಕ ಬಿಜೆಪಿ ನೇತೃತ್ವದ ಸರ್ಕಾರ ವರದಿಯ ಅಂಶಗಳನ್ನು ಬಹಿರಂಗಪಡಿಸಿದೆ.
1983ರ ಹಿಂಸಾಚಾರವನ್ನು ಕೋಮುಗಲಭೆ ಎಂದು ಬಿಂಬಿಸಲಾಗಿದ್ದಕ್ಕೆ ವಿರುದ್ಧವಾಗಿ ತಿವಾರಿ ವರದಿ, ಇಂಥ ವಿಶ್ಲೇಷಣೆ ಮೂಢನಂಬಿಕೆಯ ಕ್ರಮ ಎಂದು ತಳ್ಳಿಹಾಕಿದೆ. ಈ ಗಲಭೆಯಿಂದ ಸಮಾಜದ ಎಲ್ಲ ವರ್ಗಗಳೂ ಹಾನಿಗೀಡಾಗಿವೆ ಮತ್ತು ಸಂತ್ರಸ್ತರು ಯಾವುದೇ ಒಂದು ನಿರ್ದಿಷ್ಟ ಸಮುದಾಯ, ಧರ್ಮ ಅಥವಾ ಭಾಷಾಗುಂಪಿಗೆ ಸೇರಿದವರಲ್ಲ ಎಂದು ಅಭಿಪ್ರಾಯಪಟ್ಟಿದೆ.







