ಪಾಕಿಸ್ತಾನದ ಜೊತೆ ನಂಟು, ಅಕ್ರಮ ಹಣ ವರ್ಗಾವಣೆ ಆರೋಪ: ಅಸ್ಸಾಂ ನಿವಾಸಿ ಜ್ಯೋತಿಕಾ ಬಂಧನ

Photo | ndtv
ಗುವಾಹಟಿ: ಪಾಕ್ ಜೊತೆ ಸಂಪರ್ಕ, ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಅಸ್ಸಾಂನ ಸೋನಿತ್ಪುರ ಜಿಲ್ಲೆಯ ನಿವಾಸಿ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.
ಜ್ಯೋತಿಕಾ ಕಲಿತಾ ಬಂಧಿತ ಮಹಿಳೆ. ಆಕೆಯನ್ನು ಡಿಸೆಂಬರ್ 5ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆಕೆಯ ಜೊತೆಗೆ ಆಕೆಯ ಸಹೋದರ ಸೇರಿದಂತೆ ಇತರ ನಾಲ್ವರನ್ನು ಕೂಡ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಜ್ಯೋತಿಕಾ ದುಬೈನಲ್ಲಿ ಕೆಲಸ ಮಾಡುತ್ತಿದ್ದಾಗ ಪಾಕಿಸ್ತಾನಿ ಪ್ರಜೆಯನ್ನು ರಹಸ್ಯವಾಗಿ ವಿವಾಹವಾಗಿದ್ದಳು ಎಂದು ತಿಳಿದು ಬಂದಿದೆ. ಜ್ಯೋತಿಕಾ ದೊಡ್ಡ ಮೊತ್ತದ ಹಣವನ್ನು ಮ್ಯೂಲ್ ಖಾತೆಗಳ ಮೂಲಕ ಅಕ್ರಮವಾಗಿ ವರ್ಗಾಯಿಸುತ್ತಿದ್ದಳು. ಆಕೆ ಮಾರಿಷಸ್, ನೇಪಾಳ ಮತ್ತು ಬಾಂಗ್ಲಾದೇಶ ಸೇರಿದಂತೆ ದೇಶಗಳಲ್ಲಿ ಆನ್ಲೈನ್ ವಂಚನೆಯಲ್ಲಿ ಭಾಗಿಯಾಗಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜ್ಯೋತಿಕಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಆಕೆಯ ಹೆಸರಿನಲ್ಲಿ 17 ಬ್ಯಾಂಕ್ ಖಾತೆಗಳು ಇರುವುದು ಪತ್ತೆಯಾಗಿದೆ. ಈ ಖಾತೆಗಳಿಗೆ ದೊಡ್ಡ ಮಟ್ಟದಲ್ಲಿ ಹಣ ಜಮೆಯಾಗಿತ್ತು. ಆಕೆಯಿಂದ 44 ಎಟಿಎಂ ಕಾರ್ಡ್ಗಳು ಹಲವು ಚೆಕ್ಬುಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.





