ಮಣಿಪುರ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ಅಸ್ಸಾಂನ ಥಡೌ ಸಮುದಾಯದ ನಾಯಕನನ್ನು ಹತ್ಯೆಗೈದ ಶಂಕಿತ ಉಗ್ರರು

PC : NDTV
ಗುವಾಹಟಿ, ಆ. 31: ಮಣಿಪುರ ರಾಜಧಾನಿ ಇಂಫಾಲದಲ್ಲಿ ಆಗಸ್ಟ್ 6ರಂದು ಶಾಂತಿ ಸಭೆಯಲ್ಲಿ ಪಾಲ್ಗೊಂಡ ಅಸ್ಸಾಂನ ಥಡೌ ಸಮುದಾಯದ ನಾಯಕನನ್ನು ಶಂಕಿತ ಉಗ್ರರು ಹತ್ಯೆಗೈದಿದ್ದಾರೆ.
ಅಸ್ಸಾಂನ ‘ಥಡೌ ಲಿಟರೇಚರ್ ಸೊಸೈಟಿ’ಯ ಅಧ್ಯಕ್ಷ ನೆಹ್ಕಾಮ್ ಜೋಮ್ಹಾವೊ (59) ಅವರನ್ನು ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಮಾಂಜಾ ಪ್ರದೇಶದ ಚೊಂಗ್ಹಾಂಗ್ ವೆಂಗ್ನಲ್ಲಿರುವ ಅವರ ನಿವಾಸದಿಂದ ಶನಿವಾರ ರಾತ್ರಿ ಸುಮಾರು 7.30ಕ್ಕೆ ಅಪಹರಿಸಲಾಗಿದೆ. ಅನಂತರ ಹತ್ಯೆಗೈಯಲಾಗಿದೆ.
ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ರಾತ್ರಿ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ಹತ್ಯೆಗೈಯಲಾಗಿದೆಯಾದರೂ ಮೃತದೇಹ ಇದುವರೆಗೆ ಪತ್ತೆಯಾಗಿಲ್ಲ. ಅವರನ್ನು ಹತ್ಯೆಗೈದಿರುವುದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ’’ ಎಂದು ಕರ್ಬಿ ಅಂಗ್ಲಾಂಗ್ ನ ಪೊಲೀಸ್ ವರಿಷ್ಠ ಸಂಜೀಬ್ ಸೈಕಿಯಾ ತಿಳಿಸಿದ್ದಾರೆ.
ಈ ಹತ್ಯೆಯ ಹಿಂದಿನ ಕಾರಣವನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
Next Story





