ವಿಧಾನಸಭಾ ಚುನಾವಣೆಗೆ AICC ಹಿರಿಯ ವೀಕ್ಷಕರ ಪಟ್ಟಿ ಪ್ರಕಟ; ಅಸ್ಸಾಂಗೆ ಡಿ.ಕೆ. ಶಿವಕುಮಾರ್, ಕೇರಳಕ್ಕೆ ಕೆ.ಜೆ. ಜಾರ್ಜ್ ಗೆ 'ಚಾರ್ಜ್'

ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್ |Photo Credit ; PTI
ಹೊಸದಿಲ್ಲಿ, ಜ. 7: ಮುಂಬರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ವಿವಿಧ ರಾಜ್ಯಗಳಿಗೆ ಹಿರಿಯ ವೀಕ್ಷಕರನ್ನು ನೇಮಕ ಮಾಡಿದೆ. ಅಸ್ಸಾಂ ರಾಜ್ಯದ ಎಐಸಿಸಿ ಹಿರಿಯ ವೀಕ್ಷಕರಾಗಿ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಈ ನೇಮಕಾತಿಗಳು ತಕ್ಷಣದಿಂದ ಜಾರಿಗೆ ಬರುತ್ತವೆ.
ಅಸ್ಸಾಂ ಗೆ ವೀಕ್ಷಕರಾಗಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಭೂಪೇಶ್ ಬಘೇಲ್ ಮತ್ತು ಬಂಧು ಟಿರ್ಕಿ ಅವರನ್ನೂ ಹಿರಿಯ ವೀಕ್ಷಕರಾಗಿ ನೇಮಕ ಮಾಡಲಾಗಿದೆ.
ಕೇರಳಕ್ಕೆ ಸಚಿನ್ ಪೈಲಟ್, ಕೆ.ಜೆ. ಜಾರ್ಜ್, ಇಮ್ರಾನ್ ಪ್ರತಾಪಗರ್ಹಿ ಹಾಗೂ ಕನ್ಹಯ್ಯಾ ಕುಮಾರ್ ಅವರನ್ನು ವೀಕ್ಷಕರಾಗಿ ನಿಯೋಜಿಸಲಾಗಿದೆ.
ತಮಿಳುನಾಡು ಮತ್ತು ಪುದುಚೇರಿಗೆ ಮುಕುಲ್ ವಾಸ್ನಿಕ್, ಉತ್ತಮ್ ಕುಮಾರ್ ರೆಡ್ಡಿ ಮತ್ತು ಖಾಝಿ ಮುಹಮ್ಮದ್ ನಿಝಾಮುದ್ದೀನ್ ಅವರನ್ನು ನೇಮಕ ಮಾಡಲಾಗಿದೆ.
ಪಶ್ಚಿಮ ಬಂಗಾಳಕ್ಕೆ ಸುದೀಪ್ ರಾಯ್ ಬರ್ಮನ್, ಶಕೀಲ್ ಅಹ್ಮದ್ ಖಾನ್ ಮತ್ತು ಪ್ರಕಾಶ್ ಜೋಶಿ ಅವರನ್ನು ಹಿರಿಯ ವೀಕ್ಷಕರಾಗಿ ನಿಯೋಜಿಸಲಾಗಿದೆ.
ಮುಂಬರುವ ಚುನಾವಣೆಗಳಿಗೆ ಪಕ್ಷದ ಸಂಘಟನೆ ಬಲಪಡಿಸುವ ಉದ್ದೇಶದಿಂದ ಈ ನೇಮಕಾತಿಗಳನ್ನು ಮಾಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ್ದಾರೆ.







