ಮಕ್ಕಳಲ್ಲಿ ಭಿನ್ನಸಾಮರ್ಥ್ಯದ ಆರಂಭಿಕ ಲಕ್ಷಣಗಳನ್ನು ಗುರುತಿಸಲು ಅಂಗನವಾಡಿ ಕಾರ್ಯಕರ್ತೆಯರ ನೆರವು ; ಕೇಂದ್ರದಿಂದ ವಿನೂತನ ಕಾರ್ಯಕ್ರಮ

ಸ್ಮೃತಿ ಇರಾನಿ | Photo: PTI
ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಅಂಗನವಾಡಿ ಕಾರ್ಯಕರ್ತೆಯರು ಭಿನ್ನಸಾಮರ್ಥ್ಯದ ಮಕ್ಕಳನ್ನು ಆರಂಭಿಕ ಹಂತದಲ್ಲೇ ಗುರುತಿಸಲು ನೆರವಾಗಲಿದ್ದಾರೆ. ಮಕ್ಕಳ ದೈಹಿಕ ಹಾಗೂ ಬೌದ್ಧಿಕ ಭಿನ್ನಸಾಮರ್ಥ್ಯ ಸೇರಿದಂತೆ ಭಿನ್ನಸಾಮರ್ಥ್ಯದ ಆರಂಭಿಕ ಚಿಹ್ನೆಗಳನ್ನು ಪರಿಶೀಲಿಸುವುದರ ಜೊತೆಗೆ ಆ ಮಕ್ಕಳನ್ನು ಸಾಮುದಾಯಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು ಬೇಕಾದ ಸಹಾಯ ಹಾಗೂ ಬೆಂಬಲನ್ನು ಕೂಡಾ ಅವರು ನೀಡಲಿದ್ದಾರೆ.
ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸ್ಮೃತಿ ಇರಾನಿ ಮಂಗಳವಾರ ಆರಂಭಿಸಿದ ‘ದಿವ್ಯಾಂಗ ಮಕ್ಕಳಿಗಾಗಿನ ಅಂಗನವಾಡಿ ಶಿಷ್ಟಾಚಾರ ಕುರಿತ ರಾಷ್ಟ್ರೀಯ ಕಾರ್ಯಕ್ರಮ’ದಲ್ಲಿ ಈ ಯೋಜನೆಯನ್ನು ಅನಾವರಣಗೊಳಿಸಿದರು.
ಸಮಾಜದಲ್ಲಿ ಭಿನ್ನಸಾಮರ್ಥ್ಯದ ಮಕ್ಕಳು ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಅವರ ಕುಟುಂಬಗಳಿಗೆ ಅಥವಾ ಸಮುದಾಯಗಳಿಗೆ ಅರಿವು ಹಾಗೂ ಬೆಂಬಲವನ್ನು ಒದಗಿಸುವ ಚಿಂತನೆಯನ್ನು ಈ ಯೋಜನೆ ಹಂಒದಿದೆ.
ಭಾರತದಲ್ಲಿ ಮೂರನೇ ಒಂದರಷ್ಟು ಭಿನ್ನಸಾಮರ್ಥ್ಯದ ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ಸಮಪರ್ಕವಾಗಿ ಸ್ಪಂದಿಸುವ ಮೂಲಕ ತಡೆಗಟ್ಟಲು ಸಾಧ್ಯವಿದೆಯೆಂಬುದನ್ನು ಅಧ್ಯಯನ ವರದಿಗಳು ತೋರಿಸಿಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಕ್ರಮವನ್ನು ಕೈಗೊಂಡಿದೆ.
ದೇಶಾದ್ಯಂತ 14 ಲಕ್ಷಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಭಿನ್ನಸಾಮರ್ಥ್ಯದ ಮಕ್ಕಳನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಲು ನೆರವು ನೀಡುವುದರ ಜೊತೆಗೆ ಅವರ ಕುಟುಂಬಗಳಿಗೆ ಆರೋಗ್ಯ,ಶೈಕ್ಷಣಿಕ ಹಾಗೂ ಆರ್ಥಿಕ ಬೆಂಬಲವನ್ನು ಖಾತರಿಪಡಿಸುವ ವಿಶಿಷ್ಟ ಬಿನ್ನಸಾಮರ್ಥ್ಯದ ಐಡಿಗಳು (ಯುಡಿಐಡಿ) ಹಾಗೂ ಭಿನ್ನಸಾಮರ್ಥ್ಯದ ಪ್ರಮಾಣ ಪತ್ರಗಳನ್ನು ದೊರಕಿಸಿಕೊಡಲು ಸಹಾಯ ಮಾಡಲಿದ್ದಾರೆ.







