ತಾಯ್ನಾಡಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ; ಅದ್ದೂರಿ ಸ್ವಾಗತ

Photo credit: PTI
ಹೊಸದಿಲ್ಲಿ : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ್ದ ಗಗನಯಾತ್ರಿ ಶುಭಾಂಶು ಶುಕ್ಲಾ ರವಿವಾರ ಭಾರತಕ್ಕೆ ಮರಳಿದ್ದಾರೆ.
ಅಮೆರಿಕದಿಂದ ಮಧ್ಯರಾತ್ರಿ 1.30ರ ವೇಳೆಗೆ ದಿಲ್ಲಿಗೆ ಆಗಮಿಸಿದ ಶುಭಾಂಶು ಶುಕ್ಲಾ ಅವರನ್ನು ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಅದ್ದೂರಿಯಾಗಿ ಸ್ವಾಗತಿಸಿದರು.
“ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು ಬೆಳಗಿನ ಜಾವ ದಿಲ್ಲಿಗೆ ಬಂದಿಳಿದರು. ಇವರೊಂದಿಗೆ ಮತ್ತೊಬ್ಬ ಗಗನಯಾತ್ರಿ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಕೂಡ ಮರಳಿದರು ಎಂದು ಜಿತೇಂದ್ರ ಸಿಂಗ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶುಕ್ಲಾ ಖಾಸಗಿ ಬಾಹ್ಯಾಕಾಶ ಅಭಿಯಾನ ಆಕ್ಸಿಯಂ-4ರ ತಂಡದ ಇತರ ಮೂವರೊಂದಿಗೆ ಬಾಹ್ಯಾಕಾಶ ಯಾನ ಕೈಗೊಂಡಿದ್ದರು. ಜೂ. 25ರಂದು ಫ್ಲೋರಿಡಾದಿಂದ ಯಾನವನ್ನು ಆರಂಭಿಸಿದ್ದ ಆಕ್ಸಿಯಂ-4 ಜೂ.26ರಂದು ಐಎಸ್ಎಸ್ ತಲುಪಿತ್ತು. ಜು.15ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಗೆ ಬಂದಿಳಿದಿದ್ದರು. ತನ್ನ 18 ದಿನಗಳ ಅಭಿಯಾನದಲ್ಲಿ ಶುಕ್ಲಾ 60ಕ್ಕೂ ಅಧಿಕ ಪ್ರಯೋಗಗಳನ್ನು ಕೈಗೊಂಡಿದ್ದರು.





