‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಕನಿಷ್ಠ 100 ಮಂದಿ ಭಯೋತ್ಪಾದಕರು ಹತರಾಗಿದ್ದಾರೆ: ರಾಜನಾಥ್ ಸಿಂಗ್

Photo credit: PTI
ಹೊಸದಿಲ್ಲಿ: ಬುಧವಾರ ಮುಂಜಾನೆ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಕನಿಷ್ಠ ಪಕ್ಷ 100 ಮಂದಿ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಗುರುವಾರ ನಡೆದ ಸರ್ವಪಕ್ಷಗಳ ಸಭೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಪಾಕಿಸ್ತಾನವೇನಾದರೂ ಪ್ರತೀಕಾರದ ಕ್ರಮ ಕೈಗೊಂಡರೆ, ಅದಕ್ಕೆ ಭಾರತ ತಕ್ಕ ತಿರುಗೇಟು ನೀಡಲಿದೆ ಎಂದೂ ಅವರು ಸರ್ವಪಕ್ಷಗಳ ಸಭೆಯಲ್ಲಿ ತಿಳಿಸಿದರು.
ಎಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಉಲ್ಬಣಗೊಂಡಿರುವ ಬೆನ್ನಿಗೇ, ಕಳೆದ 15 ದಿನಗಳಲ್ಲಿ ಇಂದು ಎರಡನೆ ಬಾರಿ ಸರಕಾರಿ ಪದಾಧಿಕಾರಿಗಳು ಹಾಗೂ ವಿಪಕ್ಷಗಳ ನಾಯಕರು ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಂಡರು. ಈ ವೇಳೆ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಯಶಸ್ಸು ಹಾಗೂ ನಂತರದ ಬೆಳವಣಿಗೆಗಳ ಕುರಿತು ಕೇಂದ್ರ ಸರಕಾರವು ವಿಪಕ್ಷಗಳ ನಾಯಕರಿಗೆ ಮಾಹಿತಿ ನೀಡಿತು.
ಈ ಸಭೆಯಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಎಸ್.ಜೈಶಂಕರ್, ಜೆ.ಪಿ.ನಡ್ಡಾ ಹಾಗೂ ನಿರ್ಮಲಾ ಸೀತಾರಾಮನ್ ಕೇಂದ್ರ ಸರಕಾರದ ಪರವಾಗಿ ಉಪಸ್ಥಿತರಿದ್ದರು. ವಿಪಕ್ಷಗಳ ಪರವಾಗಿ ಕಾಂಗ್ರೆಸ್ ಪಕ್ಷದಿಂದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಸಂದೀಪ್ ಬಂಡೋಪಾಧ್ಯಾಯ್, ಡಿಎಂಕೆ ಪಕ್ಷದಿಂದ ಟಿ.ಆರ್.ಬಾಲು ಸೇರಿದಂತೆ ವಿವಿಧ ವಿರೋಧ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು. ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಹಿಸಿದ್ದರು.
ಈ ವೇಳೆ, ಭಯೋತ್ಪಾದಕರ ವಿರುದ್ಧ ಸರಕಾರ ನಡೆಸುತ್ತಿರುವ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಘೋಷಿಸಿತು.
ನಂತರ, ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಸಭೆಯಲ್ಲಿ ಸರಕಾರ ಏನು ಹೇಳಿತೊ ಅದನ್ನಷ್ಟೆ ನಾವು ಕೇಳಿದೆವು. ಕೆಲವು ವಿಷಯಗಳು ಭದ್ರತೆಯ ದೃಷ್ಟಿಯಿಂದ ಗೋಪ್ಯವಾಗಿರುವುದರಿಂದ, ಅವುಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಈ ಕಠಿಣ ಸಮಯದಲ್ಲಿ ನಾವೆಲ್ಲರೂ ನಿಮ್ಮೊಂದಿಗಿದ್ದೇವೆ ಎಂದು ನಾವು ಅವರಿಗೆ ಭರವಸೆ ನೀಡಿದೆವು. ಪ್ರಧಾನಿ ನರೇಂದ್ರ ಮೋದಿ ಕಳೆದ ಬಾರಿಯ ಸರ್ವಪಕ್ಷಗಳ ಸಭೆಯಲ್ಲೂ ಉಪಸ್ಥಿತರಿರಲಿಲ್ಲ. ಆದರೆ, ಇದು ಕಠಿಣ ಸಮಯವಾಗಿದ್ದು, ನಾವು ಯಾರನ್ನೂ ಟೀಕಿಸಲು ಬಯಸುವುದಿಲ್ಲ” ಎಂದು ಹೇಳಿದರು.
ಸಭೆಯಲ್ಲಿ ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಆಪ್ ಪಕ್ಷದ ಸಂಜಯ್ ಸಿಂಗ್, ಶಿವಸೇನೆ(ಉದ್ಧವ್ ಬಣ)ಯ ಸಂಜಯ್ ರಾವತ್, ಎನ್ಸಿಪಿ (ಎಸ್ಪಿ)ಯ ಸುಪ್ರಿಯಾ ಸುಳೆ, ಬಿಜೆಡಿಯ ಸಸ್ಮಿತ್ ಪಾತ್ರ ಹಾಗೂ ಸಿಪಿಐ(ಎಂ)ನ ಜಾನ್ ಬ್ರಿಟ್ಟಾಸ್ ಸೇರಿದಂತೆ ಹಲವು ವಿಪಕ್ಷಗಳ ನಾಯಕರು ಉಪಸ್ಥಿತರಿದ್ದರು.
ಇವರೊಂದಿಗೆ, ಜೆಡಿಯು ನಾಯಕ ಸಂಜಯ್ ಝಾ, ಕೇಂದ್ರ ಸಚಿವ ಹಾಗೂ ಲೋಕ್ ಜನಶಕ್ತಿ (ರಾಮ್ ವಿಲಾಸ್) ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಹಾಗೂ ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿ ಕೂಡಾ ಸಭೆಯಲ್ಲಿ ಭಾಗವಹಿಸಿದ್ದರು.
ನಂತರ, ವಿಪಕ್ಷಗಳಿಗೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಕುರಿತು ಮಾಹಿತಿ ನೀಡುವುದು ಸರಕಾರದ ಉದ್ದೇಶವಾಗಿತ್ತು ಎಂದು ಅರೆ ಸೇನಾಪಡೆ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದರು.
ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀಯರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಬುಧವಾರ ಮುಂಜಾನೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರರದಲ್ಲಿನ ಜೈಶೆ ಮುಹಮ್ಮದ್ ನ ಭದ್ರಕೋಟೆಯಾದ ಬಹವಲ್ಪುರ್ ಹಾಗೂ ಮುರಿಡ್ಕೆಯಲ್ಲಿನ ಲಷ್ಕರೆ ತೊಯ್ಬಾದ ನೆಲೆ ಸೇರಿದಂತೆ ಒಂಬತ್ತು ಭಯೋತ್ಪಾದಕರ ಗುರಿಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದ ಭಾರತೀಯ ವಾಯುಪಡೆಯು, ಅವುಗಳನ್ನು ಧ್ವಂಸಗೊಳಿಸಿತ್ತು.







