ಏಷ್ಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಥ್ಲೀಟ್ ಆತ್ಮಹತ್ಯೆ

ರೋಹಿಣಿ ಕಲಂ PC: x.com/HealthwireMedia
ಇಂಧೋರ್: ಕಳೆದ ವರ್ಷ ಅಬುಧಾಬಿಯಲ್ಲಿ ನಡೆದ ಅಂತರರಾಷ್ಟ್ರೀಯ ಜು-ಜಿತ್ಸು ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ್ದ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರೋಹಿಣಿ ಕಲಂ (30) ಎಂಬ ಅಥ್ಲೀಟ್ ಅವರ ಮೃತದೇಹ ಮಧ್ಯಪ್ರದೇಶದ ದೇವಾಸ್ ನಲ್ಲಿರುವ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇದು ಆತ್ಮಹತ್ಯೆಯಾಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ; ಆದರೆ ಯಾವುದೇ ಆತ್ಮಹತ್ಯೆ ಟಿಪ್ಪಣಿ ಲಭ್ಯವಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮಧ್ಯಪ್ರದೇಶದ ಇಂಧೋರ್ನಲ್ಲಿ ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯಾ ಆಟಗಾರ್ತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸಂಭವಿಸಿದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.
ದೇವಾಸ್ ನ ಅರ್ಜುನ ನಗರದಲ್ಲಿರುವ ಮನೆಯಲ್ಲಿ ರೋಹಿಣಿ ನೇಣುಬಿಗಿದ ಸ್ಥಿತಿಯಲ್ಲಿ ಇರುವುದನ್ನು ಮೊದಲು ತಂಗಿ ರೋಶ್ನಿ ನೋಡಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರು. ಆಕೆ ಮೃತಪಟ್ಟಿರುವುದನ್ನು ವೈದ್ಯರು ಪ್ರಕಟಿಸಿದರು. ರೋಹಿಣಿ ಪೋಷಕರು ಘಟನೆ ನಡೆದ ಸಂದರ್ಭದಲ್ಲಿ ಕುಟುಂಬ ಸದಸ್ಯರ ಜತೆಗೆ ಮನೆಯಿಂದ ಹೊರಗಿದ್ದರು ಎಂದು ಹೇಳಲಾಗಿದೆ. ನಾಲ್ವರು ಸಹೋದರಿಯರ ಪೈಕಿ ರೋಹಿಣಿ ಮೊದಲನೆಯವರು.
ಭಾನುವಾರ ಬೆಳಿಗ್ಗೆ ಕೂಡಾ ರೋಹಿಣಿ ನಡವಳಿಕೆ ಸಹಜವಾಗಿತ್ತು ಎಂದು ರೋಶ್ನಿ ಹೇಳಿದ್ದಾರೆ. ಜತೆಗೇ ಚಹಾ ಹಾಗೂ ಉಪಹಾರ ಸೇವಿಸಿದ್ದು, ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಳ್ಳುವ ಮುನ್ನ ಯಾರೊಂದಿಗೋ ಫೋನ್ ನಲ್ಲಿ ಮಾತನಾಡಿದ್ದಾಗಿ ಹೇಳಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ದೇವಾಸ್ ಎಸ್ಪಿ ಪುನೀತ್ ಗೆಹ್ಲೋಟ್ ಹೇಳಿದ್ದಾರೆ.
ಖಾಸಗಿ ಶಾಲೆಯಲ್ಲಿ ಸಮರಕಲೆ ತರಬೇತಿದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ರೋಹಿಣಿ, ಒಂದು ದಿನ ಮೊದಲು ಮನೆಗೆ ವಾಪಸ್ಸಾಗಿದ್ದರು. ಹೊಟ್ಟೆಯ ಶಸ್ತ್ರಚಿಕಿತ್ಸೆ ಬಳಿಕ ಅಭ್ಯಾಸ ನಡೆಸಲು ರೋಹಿಣಿ ಕಷ್ಟಪಡುತ್ತಿದ್ದರು ಎಂದು ಕುಟುಂಬದ ಮೂಲಗಳು ಹೇಳಿವೆ. ಕ್ರೀಡಾಕ್ಷೇತ್ರದ ಶ್ರೇಷ್ಠ ಸಾಧನೆಗಾಗಿ ಮಧ್ಯಪ್ರದೇಶ ಸರ್ಕಾರದ ವಿಕ್ರಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರು ಎಂದು ತಿಳಿದುಬಂದಿದೆ.







