ಕ್ರಿಸ್ಮಸ್ ಸಂದರ್ಭ ಕ್ರೈಸ್ತರ ಮೇಲೆ ದಾಳಿ; ಕಳವಳ ವ್ಯಕ್ತಪಡಿಸಿದ ಬಿಜೆಪಿ ಮಿತ್ರ ಪಕ್ಷ ಎನ್ಪಿಪಿ

ಸಾಂದರ್ಭಿಕ ಚಿತ್ರ
ಚೆನ್ನೈ, ಜ. 4: ಕ್ರಿಸ್ಮಸ್ ಆಚರಣೆ ಸಂದರ್ಭ ಹಲವು ರಾಜ್ಯಗಳಲ್ಲಿ ಕ್ರೈಸ್ತರ ಮೇಲಿನ ದಾಳಿ ಕುರಿತು ಬಿಜೆಪಿಯ ಮಿತ್ರ ಪಕ್ಷವಾಗಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿ ಕಳವಳ ವ್ಯಕ್ತಪಡಿಸಿದೆ.
ಛತ್ತೀಸ್ ಗಢದ ರಾಯಪುರ, ಅಸ್ಸಾಂನ ನಲ್ಬರಿ, ಮಧ್ಯಪ್ರದೇಶದ ಜಬಲ್ಪುರ, ಕೇರಳದ ಪಾಲಕ್ಕಾಡ್, ಉತ್ತರಾಖಂಡದ ಹರಿದ್ವಾರ್ ಹಾಗೂ ದಿಲ್ಲಿ ಸೇರಿದಂತೆ ದೇಶಾದ್ಯಂತ ಡಿಸೆಂಬರ್ ನಲ್ಲಿ ಕ್ರೈಸ್ತರ ಮೇಲೆ ದಾಳಿ ಹಾಗೂ ಕ್ರಿಸ್ಮಸ್ ಆಚರಣೆಗೆ ಅಡ್ಡಿ ಉಂಟು ಮಾಡಿದ ಹಲವು ಘಟನೆಗಳು ವರದಿಯಾಗಿವೆ.
ಈ ಹಿನ್ನೆಲೆಯಲ್ಲಿ ಎನ್ಪಿಪಿಯ ಮೇಘಾಲಯದ ಕಾರ್ಯಾಧ್ಯಕ್ಷ ಹ್ಯಾಮ್ಲೆಟ್ಸನ್ ದೊಹ್ಲಿಂಗ್, ಇಂತಹ ದಾಳಿಗಳನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಸಂಬಂಧಿತ ರಾಜ್ಯ ಸರಕಾರಗಳಿಗೆ ಮೇಘಾಲಯ ಸರಕಾರ ಪತ್ರ ಬರೆಯುವಂತೆ ಪಕ್ಷ ಆಗ್ರಹಿಸಲಿದೆ ಎಂದಿದ್ದಾರೆ.
‘‘ನಾವು ಈ ಘಟನೆಗಳನ್ನು ತೀವ್ರವಾಗಿ ವಿರೋಧಿಸುತ್ತೇವೆ. ಇಂತಹ ಘಟನೆಗಳು ಪುನರಾವರ್ತನೆ ಆಗಬಾರದು ಎಂದು ಪ್ರತಿಪಾದಿಸುತ್ತೇವೆ. ನಾವು ಇಂತಹ ಘಟನೆಗಳನ್ನು ಒಪ್ಪಿಕೊಳ್ಳುವುದಿಲ್ಲ ಹಾಗೂ ಸಹಿಸುವುದಿಲ್ಲ’’ ಎಂದು ದೊಹ್ಲಿಂಗ್ ಹೇಳಿದ್ದಾರೆ.
‘‘ನಾನು ಪಕ್ಷದ ಕಳವಳವನ್ನು ಪಕ್ಷದ ಮುಖ್ಯಸ್ಥ ಹಾಗೂ ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರಿಗೆ ನೇರವಾಗಿ ತಿಳಿಸಿದ್ದೇನೆ’’ ಎಂದು ಅವರು ಹೇಳಿದರು.
ನಾಗಾಲ್ಯಾಂಡ್ ಬ್ಯಾಪಿಸ್ಟ್ ಚರ್ಚ್ ಕೌನ್ಸಿಲ್ ಕೂಡ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದೆ. ದೇಶಾದ್ಯಂತ ಕ್ರೈಸ್ತರ ಮೇಲೆ ದಾಳಿಗಳು ಹೆಚ್ಚುತ್ತಿರುವ ಬಗ್ಗೆ ಅದು ಕಳವಳ ಹಾಗೂ ತೀವ್ರ ವಿಷಾದ ವ್ಯಕ್ತಪಡಿಸಿದೆ. ವಿಶೇಷವಾಗಿ ಕ್ರಿಸ್ಮಸ್ ಸಮಯದಲ್ಲಿ ಇಂತಹ ದಾಳಿಗಳು ಹೆಚ್ಚಾಗುತ್ತವೆ ಎಂದು ಅದು ಹೇಳಿದೆ. ಪ್ರಧಾನಿ ಮಧ್ಯಪ್ರವೇಶಿಸುವಂತೆ ಕೌನ್ಸಿಲ್ ಆಗ್ರಹಿಸಿದೆ.







