ಸೈಫ್ ಮೇಲೆ ದಾಳಿ: ಪರೋಟ, ನೀರು ಖರೀದಿಸಲು ಮಾಡಿದ ಗೂಗಲ್ ಪೇಯಿಂದ ಆರೋಪಿಯ ಸುಳಿವು

PC : PTI
ಮುಂಬೈ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆಸಿರುವನೆನ್ನಲಾದ ಬಾಂಗ್ಲಾದೇಶಿ ಪ್ರಜೆ ಮುಹಮ್ಮದ್ ಶರೀಫುಲ್ ಇಸ್ಲಾಮ್ ಶೆಹಝಾದ್ನನ್ನು ಪತ್ತೆಹಚ್ಚುವಲ್ಲಿ ಅವನು ಫೋನ್ ಮೂಲಕ ಮಾಡಿರುವ ಹಣ ಪಾವತಿಯು ಮುಂಬೈ ಪೊಲೀಸರಿಗೆ ನೆರವಾಗಿದೆ.
ಆರೋಪಿಯು ಜನವರಿ 16ರಂದು ಮುಂಬೈಯ ಉಪನಗರ ಬಾಂದ್ರಾದಲ್ಲಿರುವ ಬಾಲಿವುಡ್ ನಟನ ಅಪಾರ್ಟ್ಮೆಂಟ್ಗೆ ನುಗ್ಗಿ ಆಕ್ರಮಣ ನಡೆಸಿದ್ದಾನೆ.
ಆರೋಪಿಯು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ತನ್ನ ಹೆಸರನ್ನು ಬಿಜಯ್ ದಾಸ್ ಎಂಬುದಾಗಿ ಬದಲಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅವನನ್ನು ಥಾಣೆ ನಗರದಲ್ಲಿ ರವಿವಾರ ಬಂಧಿಸಲಾಗಿದೆ.
ಮುಹಮ್ಮದ್ ಶರೀಫುಲ್ ಇಸ್ಲಾಮ್ ವರ್ಲಿಯಲ್ಲಿರುವ ಸೆಂಚುರಿ ಮಿಲ್ ಸಮೀಪದಲ್ಲಿರುವ ಅಂಗಡಿಯೊಂದರಲ್ಲಿ ಪರೋಟ ಮತ್ತು ನೀರಿನ ಬಾಟಲಿಯೊಂದನ್ನು ಖರೀದಿಸಿ ಗೂಗಲ್ ಪೇ ಮೂಲಕ ಹಣ ಪಾವತಿಸಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
►ನೆಡುತೋಪಿನಲ್ಲಿ ಮಲಗಿದ್ದ ಆರೋಪಿ
ಯುಪಿಐ ಪಾವತಿಯ ಮೂಲಕ ಪೊಲೀಸರು ಆರೋಪಿಯ ಮೊಬೈಲ್ ನಂಬರನ್ನು ಪತ್ತೆಹಚ್ಚಿದರು. ಮೊಬೈಲ್ನ ಜಾಡನ್ನು ಅನುಸರಿಸಿ ಪೊಲೀಸರು ಥಾಣೆಗೆ ಹೋದರು. ಅಲ್ಲಿ ಆರೋಪಿಯ ಬಗ್ಗೆ ಇನ್ನಷ್ಟು ಸುಳಿವುಗಳು ಲಭಿಸಿತು. ಅಂತಿಮವಾಗಿ ಪೊಲೀಸರು ಕಾರ್ಮಿಕ ಶಿಬಿರವೊಂದರ ಸಮೀಪದಲ್ಲಿರುವ ದಟ್ಟ ನೆಡುತೋಪಿನತ್ತ ಧಾವಿಸಿದರು.
ಅಲ್ಲಿ ಸುಮಾರು 100 ಪೊಲೀಸರು ಕ್ಷಿಪ್ರ ಶೋಧ ಕಾರ್ಯಾಚರಣೆ ನಡೆಸಿದರು.
‘‘ಅಲ್ಲಿ ಶೋಧ ನಡೆಸಿದ ಪೊಲೀಸರಿಗೆ ಯಾರೂ ಕಾಣಲಿಲ್ಲ. ಪೊಲೀಸರು ಇನ್ನೇನು ಅಲ್ಲಿಂದ ಹೊರಡುವುದರಲ್ಲಿದ್ದರು. ಆದರೆ, ಹೊರಡುವ ಮುನ್ನ ಇನ್ನೊಮ್ಮೆ ಶೋಧ ನಡೆಸಲು ನಿರ್ಧರಿಸಿದರು. ಆಗ ಒಬ್ಬ ಪೊಲೀಸ್ ಸಿಬ್ಬಂದಿ ಹಾಯಿಸಿದ ಟಾರ್ಚ್ ಬೆಳಕು ನೆಲದಲ್ಲಿ ಮಲಗಿ ನಿದ್ರಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಬಿತ್ತು. ಒಬ್ಬ ಪೊಲೀಸ್ ಸಿಬ್ಬಂದಿ ಹತ್ತಿರ ಹೋದಾಗ ಆ ವ್ಯಕ್ತಿಯು ಎದ್ದು ಓಡಲು ಆರಂಭಿಸಿದನು. ಅವನನ್ನು ಬಳಿಕ ಸೆರೆಹಿಡಿಯಲಾಯಿತು’’ ಎಂದು ಮೂಲಗಳು ತಿಳಿಸಿವೆ.
►ಬಸ್ ನಿಲ್ದಾಣದಲ್ಲೇ ಮಲಗಿದ್ದ
ಮುಹಮ್ಮದ್ ಶರೀಫುಲ್ ಘಟನೆ ನಡೆದ ದಿನ ಬೆಳಗ್ಗೆ 7 ಗಂಟೆಯವರೆಗೂ ಬಾಂದ್ರಾದಲ್ಲಿದ್ದನು. ಅಲ್ಲಿನ ಬಸ್ ನಿಲ್ದಾಣವೊಂದರಲ್ಲಿ ಮಲಗಿದ್ದನು ಎಂದು ಪಿಟಿಐ ವರದಿ ಮಾಡಿದೆ. ಜನವರಿ 16ರಂದು ಮುಂಜಾನೆ ಕಳ್ಳತನ ಮಾಡುವುದಕ್ಕಾಗಿ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ನಿವಾಸ ‘ಸದ್ಗುರು ಶರಣ್’ಗೆ ಹೋಗಿದ್ದನು ಎಂದು ಪೊಲೀಸ್ ಮೂಲಗಳು ಹೇಳಿವೆ.
‘‘ಟಿವಿ ಮತ್ತು ಯೂಟ್ಯೂಬ್ನಲ್ಲಿ ನನ್ನ ಚಿತ್ರಗಳನ್ನು ನೋಡಿ ಹೆದರಿ ಥಾಣೆಗೆ ಓಡಿದೆ. ಅಲ್ಲಿನ ಬಾರೊಂದರಲ್ಲಿ ಕೆಲಸ ಮಾಡಿದ್ದರಿಂದ ಆ ಸ್ಥಳ ನನಗೆ ಪರಿಚಯವಿತ್ತು ಎಂಬುದಾಗಿ ಆರಂಭಿಕ ವಿಚಾರಣೆಯಲ್ಲಿ ಆರೋಪಿ ಹೇಳಿದ್ದಾನೆ’’ ಎಂದು ಮೂಲಗಳು ಹೇಳಿವೆ.
‘‘ಅವನು ಏಳು-ಎಂಟನೇ ಮಹಡಿವರೆಗೆ ಮೆಟ್ಟಿಲುಗಳ ಮೂಲಕ ಹೋದನು. ಬಳಿಕ ಪೈಪ್ ಮೂಲಕ 1ನೇ ಮಹಡಿ ತಲುಪಿದನು. ಆರೋಪಿಯು ಸ್ನಾನದ ಮನೆಯ ಕಿಟಿಕಿ ಮೂಲಕ ಸೈಫ್ ಅಲಿ ಖಾನ್ರ ಫ್ಲ್ಯಾಟ್ ಪ್ರವೇಶಿಸಿದನು. ಬಳಿಕ ಅವನು ಸ್ನಾನದ ಮನೆಯಿಂದ ಹೊರಬಂದನು. ಆಗ ನಟನ ಮನೆಯ ಸಿಬ್ಬಂದಿ ಅವನನ್ನು ನೋಡಿದರು. ಆಗ ಸಂಘರ್ಷ ನಡೆದು ಅಂತಿಮವಾಗಿ ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆಯಿತು’’ ಎಂದು ಪೊಲೀಸರು ತಿಳಿಸಿದರು.
ಆರೋಪಿಯು ಮಗುವನ್ನು ನೋಡಿಕೊಳ್ಳುತ್ತಿದ್ದ ಆಯಾ ಜೊತೆಗೆ ವಾಗ್ವಾದಕ್ಕಿಳಿದು ಒಂದು ಕೋಟಿ ರೂ.ಗೆ ಬೇಡಿಕೆ ಇಟ್ಟನು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಲಾಟೆ ಕೇಳಿ ಬಂದ ಸೈಫ್ಗೆ ಅವನು ಹಲವು ಬಾರಿ ಚೂರಿಯಿಂದ ತಿವಿದನು. ಆದಾಗ್ಯೂ, ಅವನನ್ನು ಕೋಣೆಯೊಳಗೆ ಕೂಡಿ ಹಾಕುವಲ್ಲಿ ಸೈಫ್ ಅಲಿ ಖಾನ್ ಯಶಸ್ವಿಯಾದರು. ಆದರೆ, ತಾನು ಬಂದ ದಾರಿಯಲ್ಲೇ ಹೊರಹೋಗುವಲ್ಲಿ ಆರೋಪಿಯು ಯಶಸ್ವಿಯಾಗಿದ್ದಾನೆ.
►ಹಗ್ಗ, ಸ್ಕ್ರೂಡ್ರೈವರ್ ವಶ
‘‘ಅವನ ಚೀಲದಿಂದ ನಾವು ಒಂದು ಸುತ್ತೆ, ಸ್ಕ್ರೂಡ್ರೈವರ್, ನೈಲಾನ್ ಹಗ್ಗ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಮಾರನೇ ದಿನ ಟಿವಿ ಮತ್ತು ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ನೋಡಿದ ಬಳಿಕವಷ್ಟೇ ತಾನು ಬಾಲಿವುಡ್ ತಾರೆಯ ಮೇಲೆ ಆಕ್ರಮಣ ನಡೆಸಿರುವುದು ಆರೋಪಿಗೆ ಗೊತ್ತಾಗಿದೆ ಎನ್ನಲಾಗಿದೆ.