ಅಕಾಸಾ ಏರ್ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯಲು ಪ್ರಯತ್ನ : ಪ್ರಯಾಣಿಕ ವಶಕ್ಕೆ

Image Source : PTI/FILE
ವಾರಣಾಸಿ, ನ. 4: ವಾರಣಾಸಿಯಿಂದ ಮುಂಬೈಗೆ ಹೊರಟಿದ್ದ ಅಕಾಸಾ ಏರ್ನ ವಿಮಾನ ಟೇಕ್ ಆಫ್ ಆಗುವ ಮುನ್ನ ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಯತ್ನಿಸಿದ ಆರೋಪದಲ್ಲಿ ಪ್ರಯಾಣಿಕರೋರ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಸೋಮವಾರ ಸಂಜೆ 6.45ಕ್ಕೆ ಹೊರಟಿದ್ದ ವಿಮಾನ ಕ್ಯುಪಿ 1497ರಲ್ಲಿ ಈ ಘಟನೆ ಸಂಭವಿಸಿದೆ.
ವಿಮಾನ ರನ್ವೇಯತ್ತ ಚಲಿಸುತ್ತಿದ್ದ ಸಂದರ್ಭ ಪ್ರಯಾಣಿಕ, ಜೌನ್ಪುರ ಜಿಲ್ಲೆಯ ಗೌರಾ ಬಾದಶಹಪುರದ ನಿವಾಸಿ ಸುಜಿತ್ ಸಿಂಗ್ ತುರ್ತು ದ್ವಾರವನ್ನು ತೆರೆಯಲು ಪ್ರಯತ್ನಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಯಾಬಿನ್ ಸಿಬ್ಬಂದಿ ಎಚ್ಚರಿಸಿದ ಹಿನ್ನೆಲೆಯಲ್ಲಿ ಪೈಲಟ್ ವಿಮಾನ ಸಂಚಾರ ನಿಯಂತ್ರಣ (ಎಟಿಸಿ)ಕ್ಕೆ ಮಾಹಿತಿ ನೀಡಿದರು ಹಾಗೂ ವಿಮಾನವನ್ನು ನಿಲುಗಡೆಗೊಳಿಸುವ ಸ್ಥಳಕ್ಕೆ ಹಿಂದೆ ತಂದರು.
ಕೂಡಲೇ ಭದ್ರತಾ ಸಿಬ್ಬಂದಿ ಎಲ್ಲಾ ಪ್ರಯಾಣಿಕರಿಗೆ ರಕ್ಷಣೆ ನೀಡಿದರು ಹಾಗೂ ವಿಚಾರಣೆಗೆ ಸುಜಿತ್ ಸಿಂಗ್ನನ್ನು ವಶಕ್ಕೆ ತೆಗೆದುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ಕೂತೂಹಲದ ಕಾರಣಕ್ಕೆ ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಪ್ರಯತ್ನಿಸಿದೆ ಎಂದು ಸುಜಿತ್ ಸಿಂಗ್ ತನಿಖಾಧಿಕಾರಿಗಳಲ್ಲಿ ತಿಳಿಸಿದ್ದಾನೆ ಎಂದು ಫೂಲ್ಪುರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ (ಎಸ್ಎಚ್ಒ) ಪ್ರವೀಣ್ ಕುಮಾರ್ ಸಿಂಗ್ ಹೇಳಿದ್ದಾರೆ.
ಸುಜಿತ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಭದ್ರತಾ ಪರಿಶೀಲನೆಯ ಬಳಿಕ ವಿಮಾನ ಮುಂಬೈಯಿಂದ ಸಂಜೆ 7.45ಕ್ಕೆ ಹೊರಟಿತು ಎಂದು ಮೂಲಗಳು ತಿಳಿಸಿವೆ.







