ಬಿಹಾರದ ಢಾಕಾ ಕ್ಷೇತ್ರದಲ್ಲಿ 80,000 ಮುಸ್ಲಿಮ್ ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನ: ವರದಿ

ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ಭಾರತೀಯ ಪ್ರಜೆಗಳಲ್ಲ ಎಂಬ ಸುಳ್ಳು ಪ್ರತಿಪಾದನೆಯ ಮೂಲಕ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಢಾಕಾ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಗಳಿಂದ ಸುಮಾರು 80,000 ಮುಸ್ಲಿಮ್ ಮತದಾರರ ಹೆಸರುಗಳನ್ನು ಅಳಿಸಲು ಯತ್ನಿಸಲಾಗಿದೆ ಎಂದು ‘reporters-collective.in’ ವರದಿ ಮಾಡಿದೆ.
ಈ ಮುಸ್ಲಿಮ್ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಕೋರಿ ಭಾರತೀಯ ಚುನಾವಣಾ ಆಯೋಗದ ಜಿಲ್ಲಾ ಅಧಿಕಾರಿ (ERO) ಮತ್ತು ಬಿಹಾರದ ಮುಖ್ಯ ಚುನಾವಣಾಧಿಕಾರಿಗಳಿಗೆ ಸಲ್ಲಿಕೆಯಾಗಿದ್ದ ಔಪಚಾರಿಕ ಲಿಖಿತ ಅರ್ಜಿಗಳಲ್ಲಿ ಬಿಜೆಪಿಯ ರಾಜ್ಯ ಕೇಂದ್ರ ಕಚೇರಿಯ ಲೆಟರ್ಹೆಡ್ ನಲ್ಲಿ ಮತ್ತು ಪಕ್ಷದ ಢಾಕಾ ಶಾಸಕರ ಆಪ್ತ ಸಹಾಯಕನ ಹೆಸರಿನಲ್ಲಿ ಸಲ್ಲಿಸಿದ ಅರ್ಜಿಗಳು ಸೇರಿವೆ.
‘ಢಾಕಾ ಕ್ಷೇತ್ರದಲ್ಲಿ ಮುಸ್ಲಿಮ್ ಮತದಾರರನ್ನು ಸಾಮೂಹಿವಾಗಿ ಪ್ರತ್ಯೇಕಿಸಲು ಮತ್ತು ತೆಗೆದುಹಾಕಲು ವ್ಯವಸ್ಥಿತ ಹಾಗೂ ಉದ್ದೇಶಿತ ಪ್ರಯತ್ನವನ್ನು ಸಾಬೀತುಗೊಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಸುಳ್ಳು ಮಾಹಿತಿಗಳನ್ನು ಒದಗಿಸುವ ಮೂಲಕ ಮತದಾರರ ಪಟ್ಟಿಗಳನ್ನು ತಿರುಚುವ ಇಂತಹ ಪ್ರಯತ್ನ ಅಪರಾಧವಾಗಿದೆ. ಆದರೆ ಚುನಾವಣಾ ಆಯೋಗದ ಅಧಿಕಾರಿಗಳು ಢಾಕಾದಲ್ಲಿ ಬೃಹತ್ ಪ್ರಮಾಣದಲ್ಲಿ ಮತದಾನದ ಹಕ್ಕುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿರುವ ಜನರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ’ ಎಂದು reporters-collective.in ತನ್ನ ವರದಿಯಲ್ಲಿ ಹೇಳಿದೆ.
ಬಿಜೆಪಿಯು ಮತದಾರರ ಪಟ್ಟಿಗಳಿಂದ ಅಳಿಸಲು ತಮ್ಮ ಹೆಸರುಗಳನ್ನು ನೀಡಿದೆ ಎನ್ನುವುದನ್ನು ಕೇಳಿರುವ ಕೆಲವು ಮುಸ್ಲಿಮ್ ನಾಗರಿಕರು ಆತಂಕದಲ್ಲಿದ್ದಾರೆ ಮತ್ತು ಹಲವರಿಗೆ ತಮ್ಮನ್ನು ವಿದೇಶಿ ಪ್ರಜೆಗಳು ಎಂದು ಘೋಷಿಸುವಂತೆ ಮಾಡಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ತಿಳಿದಿಲ್ಲ ಎನ್ನುವುದನ್ನು ʼರಿಪೋರ್ಟರ್ಸ್ ಕಲೆಕ್ಟಿವ್ʼ ಕಂಡುಕೊಂಡಿದೆ.
2020ರ ವಿಧಾನಸಭಾ ಚುನಾವಣೆಯಲ್ಲಿ ಢಾಕಾ ಕ್ಷೇತ್ರದಲ್ಲಿ ಬಿಜೆಪಿ ಸಮೀಪದ ಪ್ರತಿಸ್ಪರ್ಧಿ ಆರ್ಜೆಡಿಯನ್ನು 10,114 ಮತಗಳ ಅಂತರದಲ್ಲಿ ಸೋಲಿಸಿತ್ತು. ಈ ಕ್ಷೇತ್ರದಲ್ಲಿ ಒಟ್ಟು 2.08 ಲಕ್ಷ ಮತಗಳು ಚಲಾವಣೆಗೊಂಡಿದ್ದವು.
ಇಂತಹ ನಿಕಟ ಪೈಪೋಟಿಯ ಕ್ಷೇತ್ರಗಳಲ್ಲಿ ಕೆಲವೇ ಸಾವಿರಗಳಷ್ಟು ತಪ್ಪಾಗಿ ಅಳಿಸಲಾದ ಮತಗಳು ಸಹ ಫಲಿತಾಂಶವನ್ನು ಗಣನೀಯವಾಗಿ ಬದಲಿಸಬಹುದು ಎನ್ನುವುದನ್ನು ಗಮನಿಸುವುದು ಮುಖ್ಯವಾಗಿದೆ.
ಢಾಕಾದಲ್ಲಿ ನಡೆದಿದ್ದ ಪ್ರಯತ್ನಗಳು ಅಂತಿಮ ಮತದಾರರ ಪಟ್ಟಿಯಿಂದ ಸುಮಾರು ಶೇ.40ರಷ್ಟು ಮತದಾರರನ್ನು ತೆಗೆದುಹಾಕುವ ಗುರಿಯನ್ನು ಹೊಂದಿದ್ದವು.
ಜಿಲ್ಲಾ ಚುನಾವಣಾ ನೋಂದಣಾಧಿಕಾರಿಗೆ ಬಿಜೆಪಿ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ʼರಿಪೋರ್ಟರ್ಸ್ ಕಲೆಕ್ಟಿವ್ʼ ಪರಿಶೀಲಿಸಿದ್ದು, ಬಿಜೆಪಿ ಅಳಿಸಲು ಬಯಸಿದ್ದ ಎಲ್ಲ ಮತದಾರರೂ ಮುಸ್ಲಿಮರಾಗಿದ್ದರು.
ಪ್ರತಿ ಅರ್ಜಿಗೂ ಬಿಜೆಪಿಯ ಬೂತ್ ಮಟ್ಟದ ಏಜೆಂಟ್(ಬಿಎಲ್ಎ) ಪರವಾಗಿ ಸಹಿ ಮಾಡಲಾಗಿತ್ತು. ಮತದಾರರ ಹೆಸರುಗಳನ್ನು ಅಳಿಸಲು ಕಾರಣಗಳನ್ನು ಒದಗಿಸುವುದು ಅಗತ್ಯವಾಗಿದ್ದರೂ ಬಿಜೆಪಿಯ ಬಿಎಲ್ಎ ಅದನ್ನು ಪೂರೈಸಿರಲಿಲ್ಲ. ಒಟ್ಟಾರೆಯಾಗಿ 13 ದಿನಗಳ ಅವಧಿಯಲ್ಲಿ ಅಳಿಸುವಿಕೆಗಾಗಿ 130 ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು.
ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕೊನೆಯ ದಿನ ಢಾಕಾ ಶಾಸಕ ಪವನಕುಮಾರ್ ಜೈಸ್ವಾಲ್ ರ ಆಪ್ತ ಸಹಾಯಕ ಧೀರಜ್ ಕುಮಾರ್ ಹೆಸರಿನಲ್ಲಿ ಸಹಿ ಮಾಡಿದ್ದ ಹೊಸ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಜನವರಿ 2025ರವರೆಗೆ ಮತದಾರರ ಪಟ್ಟಿಯಲ್ಲಿರದಿದ್ದ ಜನರನ್ನು ವಸತಿ ಪ್ರಮಾಣಪತ್ರಗಳು ಸೇರಿದಂತೆ ಸೂಕ್ತ ದಾಖಲೆಗಳಿಲ್ಲದೆ ಕರಡು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿತ್ತು.
ಹಿಂದೆ ಸಲ್ಲಿಕೆಯಾಗಿದ್ದ ಅರ್ಜಿಗಳಂತೆ ಇದು ಕೆಲವೇ ನೂರು ಹೆಸರುಗಳ ಕುರಿತಾಗಿರಲಿಲ್ಲ,ಈ ಅರ್ಜಿಯು ಢಾಕಾ ಮತದಾರರ ಪಟ್ಟಿಗಳಿಂದ 78,384 ಹೆಸರುಗಳನ್ನು ಅಳಿಸುವಂತೆ ಕೋರಿತ್ತು.
ಅವರ ಹೆಸರುಗಳು ಮತ್ತು ಮತದಾರರ ಗುರುತಿನ ಚೀಟಿ ಸಂಖ್ಯೆಗಳನ್ನು ವ್ಯವಸ್ಥಿತವಾಗಿ ಪಟ್ಟಿ ಮಾಡಲಾಗಿತ್ತು. ಬಿಜೆಪಿಯ ಬಿಹಾರ ಪ್ರಧಾನ ಕಚೇರಿಯ ಲೆಟರ್ಹೆಡ್ ನಲ್ಲಿ ಪತ್ರದ ಮೂಲಕ ಪಾಟ್ನಾದಲ್ಲಿಯ ಮುಖ್ಯ ಚುನಾವಣಾಧಿಕಾರಿಗೆ ಈ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಈ ಎಲ್ಲ 78,384 ಮತದಾರರು ಭಾರತೀಯ ಪ್ರಜೆಗಳಲ್ಲ ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ʼರಿಪೋರ್ಟರ್ಸ್ ಕಲೆಕ್ಟಿವ್ʼ ಢಾಕಾದ ಇಆರ್ಒ ರನ್ನು ಸಂಪರ್ಕಿಸಿದಾಗ, ಸಾಮೂಹಿಕವಾಗಿ ಮತದಾರರರನ್ನು ತೆಗೆದುಹಾಕುವ ಇಂತಹ ಮನವಿಗಳನ್ನು ಅಂಗೀಕರಿಸಲಾಗುವುದಿಲ್ಲ ಎಂದು ಅರ್ಜಿ ಸಲ್ಲಿಸಿದವರಿಗೆ ತಾನು ತಿಳಿಸಿದ್ದೇನೆ ಎಂದು ಸಮಜಾಯಿಷಿ ನೀಡಿದರು. ಆದರೆ ಈ ಅರ್ಜಿಗಳಿಗೆ ಸಂಬಂಧಿಸಿದಂತೆ ತನ್ನ ಕಚೇರಿಯಿಂದ ಯಾವುದೇ ಹಿಂಬರಹ ಅಥವಾ ಅಧಿಕೃತ ಸಂವಹನದ ಪುರಾವೆಗಳನ್ನು ಹಂಚಿಕೊಳ್ಳಲು ಅವರು ನಿರಾಕರಿಸಿದ್ದಾರೆ.







