ಸರ್ಕಾರದಿಂದ ವಾಣಿಜ್ಯ ಬಳಕೆಗಾಗಿ 91 ಕಲ್ಲಿದ್ದಲು ಗಣಿ ಹರಾಜು

ಸಾಂದರ್ಭಿಕ ಚಿತ್ರ Photo: PTI
ಹೊಸದಿಲ್ಲಿ: ಇದುವರೆಗೆ ಸರ್ಕಾರ ಒಟ್ಟು 91 ಕಲ್ಲಿದ್ದಲು ಗಣಿಗಳನ್ನು ವಾಣಿಜ್ಯ ಬಳಕೆಗಾಗಿ ಹರಾಜು ಮಾಡಿದ್ದು, ವಾರ್ಷಿಕ 33 ಸಾವಿರ ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. 2020ರಲ್ಲಿ ವಾಣಿಜ್ಯ ಕಲ್ಲಿದ್ದಲು ಹರಾಜು ಪದ್ಧತಿ ಆರಂಭಿಸಿದ ಬಳಿಕ ಪಾರದರ್ಶಕ ಮತ್ತು ನ್ಯಾಯಸಮ್ಮತ ಹರಾಜು ಪ್ರಕ್ರಿಯೆಯನ್ನು ಉದ್ಯಮ ಧನಾತ್ಮಕವಾಗಿ ಸ್ವೀಕರಿಸಿದೆ. ಕಲ್ಲಿದ್ದಲು ಬ್ಲಾಕ್ ಗಳ ಮಾರಾಟಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ದೂರುಗಳು ಬಂದಿಲ್ಲ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
2015 ನೇ ಹಣಕಾಸು ವರ್ಷದಿಂದ 2020 ನೇ ಹಣಕಾಸು ವರ್ಷದ ವರೆಗೆ ಒಟ್ಟು 24 ಕಲ್ಲಿದ್ದಲು ಗಣಿಗಳನ್ನು ನಿರ್ಬಂಧಿತ ಹರಾಜು ಮೂಲಕ ಮಾರಾಟ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
"ಇದುವರೆಗೆ ಒಟ್ಟು 91 ಕಲ್ಲಿದ್ದಲು ಗಣಿಗಳನ್ನು ವಾಣಿಜ್ಯ ಹರಾಜು ವ್ಯವಸ್ಥೆಯಡಿ ಹರಾಜು ಮಾಡಲಾಗಿದ್ದು, ವಾರ್ಷಿಕ 33 ಸಾವಿರ ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಇದು ಕಾರ್ಯಾರಂಭ ಮಾಡಿದ ಬಳಿಕ 3 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವಾಲಯದ ಪ್ರಕಟಣೆ ಹೇಳಿದೆ.
ವಾಣಿಜ್ಯ ಹರಾಜಿನ ಒಂಬತ್ತನೇ ಸುತ್ತಿನ ಅಡಿಯಲ್ಲಿ 40 ಬಿಡ್ ಗಳನ್ನು ಆಫ್ ಲೈನ್ ಮಾದರಿಯಲ್ಲಿ ಸ್ವೀಕರಿಸಲಾಗಿದೆ ಎಂದು ಫೆಬ್ರುವರಿ 19ರಂದು ಸರ್ಕಾರ ತಿಳಿಸಿದ್ದು, ಇದರ ಫಲಿತಾಂಶಗಳನ್ನು ಇನ್ನು ಪ್ರಕಟವಾಬೇಕಾಗಿದೆ.
ಈ ಹರಾಜು ವ್ಯವಸ್ಥೆ ಕಲ್ಲಿದ್ದಲು ಉದ್ಯಮದಲ್ಲಿ ಇದ್ದ ಅಗಾಧ ಅವಕಾಶಗಳನ್ನು ಅನಾವರಣಗೊಳಿಸಿದ್ದು ಮಾತ್ರವಲ್ಲದೇ, ಇದು ದೇಶದಲ್ಲಿ ವಿವಿಧ ವಲಯಗಳ ಸುಸ್ಥಿರ ಅಭಿವೃದ್ಧಿಗೆ ಕೂಡಾ ಕಾರಣವಾಗಿದೆ. ಸರ್ಕಾರದ ನೀತಿಗಳು, ಕಲ್ಲಿದ್ದಲು ಬ್ಲಾಕ್ಗಳ ಹರಾಜಿನಲ್ಲಿ ಕಂಪನಿಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸಶಕ್ತಗೊಳಸಿವೆ ಎಂದು ಪ್ರಕಟಣೆ ವಿವರಿಸಿದೆ.







