ನ.29ರಿಂದ ಪ್ರಮುಖ ಖನಿಜ ನಿಕ್ಷೇಪಗಳ ಹರಾಜು ಪ್ರಾರಂಭ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಲೀಥಿಯಂ, ಗ್ರಾಫೈಟ್, ಕೋಬಾಲ್ಟ್, ಟೈಟಾನಿಯಂ ಮತ್ತು ರೇರ್ ಅರ್ತ್ ಎಲಿಮೆಂಟ್(ಆರ್ಇಇ)ಗಳಿಗಾಗಿ ಹರಾಜು ಪ್ರಕ್ರಿಯೆಯ ಮೊದಲ ಸುತ್ತನ್ನು ಕೇಂದ್ರವು ನ.29ರಿಂದ ಪ್ರಾರಂಭಿಸಲಿದೆ. ಮೊದಲ ಹಂತದಲ್ಲಿ ಈ ಪ್ರಮುಖ ಖನಿಜಗಳನ್ನು ಒಳಗೊಂಡಿರುವ ಸುಮಾರು 20 ಬ್ಲಾಕ್ಗಳನ್ನು ಹರಾಜಿಗಿರಿಸಲಾಗಿದೆ.
‘ಇದು ನಮ್ಮ ಆರ್ಥಿಕತೆಯನ್ನು, ರಾಷ್ಟ್ರಿಯ ಭದ್ರತೆಯನ್ನು ಹೆಚ್ಚಿಸುವ ಮತ್ತು ಶುದ್ಧ ಇಂಧನ ಭವಿಷ್ಯಕ್ಕೆ ನಮ್ಮ ಪರಿವರ್ತನೆಗೆ ಪೂರಕವಾಗುವ ಒಂದು ಮಹತ್ವದ ಉಪಕ್ರಮವಾಗಿದೆ’ ಎಂದು ಗಣಿಗಾರಿಕೆ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಈ ಖನಿಜಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಸಾಮಾನ್ಯ ಪೂರೈಕೆಯನ್ನು ಆಮದುಗಳ ಮೂಲಕ ಒದಗಿಸಲಾಗುತ್ತದೆ.
ಸರಕಾರದ ಪ್ರಕಾರ ನವೀಕರಿಸಬಹುದಾದ ಇಂಧನ, ಔಷಧಿಗಳು, ಹೈ-ಟೆಕ್ ಇಲೆಕ್ಟ್ರಾನಿಕ್ಸ್,ದೂರಸಂಪರ್ಕ,ಸಾರಿಗೆಯಂತಹ ವಿವಿಧ ಕ್ಷೇತ್ರಗಳಲ್ಲಿ ಮತ್ತು ಗಿಗಾ ಫ್ಯಾಕ್ಟರಿಗಳ ಸ್ಥಾಪನೆ ಇತ್ಯಾದಿಗಳಲ್ಲಿ ಈ ಖನಿಜಗಳು ನಿರ್ಣಾಯಕ ಪಾತ್ರವನ್ನು ಹೊಂದಿವೆ.
ಈ ಖನಿಜಗಳ ಲಭ್ಯತೆಯ ಕೊರತೆ ಮತ್ತು ಅವುಗಳ ಉತ್ಖನನ ಮತ್ತು ಸಂಸ್ಕರಣೆ ಕೆಲವೇ ದೇಶಗಳಿಗೆ ಸೀಮಿತಗೊಂಡಿರುವುದು ಪೂರೈಕೆ ಸರಪಳಿಯ ದುರ್ಬಲತೆಗೆ ಕಾರಣವಾಗಬಹುದು. ಭವಿಷ್ಯದ ಜಾಗತಿಕ ಆರ್ಥಿಕತೆಯು ಲೀಥಿಯಂ, ಕೋಬಾಲ್ಟ್, ಟೈಟಾನಿಯಂ ಮತ್ತು ಆರ್ಇಇಗಳಂತಹ ಖನಿಜಗಳನ್ನು ಅವಲಂಬಿಸಿರುವ ತಂತ್ರಜ್ಞಾನಗಳನ್ನು ಆಧರಿಸಿರುತ್ತದೆ ಎಂದು ಸಚಿವಾಲಯವು ತಿಳಿಸಿದೆ.
ಹರಾಜಿನಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಈ ಪ್ರಮುಖ ಖನಿಜಗಳಿಗೆ ತರ್ಕಬದ್ಧ ರಾಯಧನವನ್ನು ನಿಗದಿಗೊಳಿಸಲಾಗಿದೆ. ಟೆಂಡರ್ ನಮೂನೆಗಳ ಮಾರಾಟ ನ.29ರಿಂದ ಆರಂಭಗೊಳ್ಳಲಿದೆ.







