ಮೊದಲ ಟಿ20 | ಮಿಚೆಲ್ ಓವೆನ್ ವಿಶಿಷ್ಟ ದಾಖಲೆ; ವಿಂಡೀಸ್ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

PC : @ICC
ಜಮೈಕಾ, ಜು.21: ಚೊಚ್ಚಲ ಪಂದ್ಯವನ್ನಾಡಿದ ಮಿಚೆಲ್ ಓವೆನ್ ಅವರ ಆಲ್ರೌಂಡರ್ ಆಟದ ನೆರವಿನಿಂದ ಆತಿಥೇಯ ವೆಸ್ಟ್ಇಂಡೀಸ್ ತಂಡದ ವಿರುದ್ಧದ ಮೊದಲ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ತಂಡವು 3 ವಿಕೆಟ್ ಗಳ ಅಂತರದಿಂದ ರೋಚಕ ಜಯ ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ರವಿವಾರ ಕಿಂಗ್ ಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 190 ರನ್ ಪಡೆದಿದ್ದ ಆಸ್ಟ್ರೇಲಿಯ ತಂಡವು 18.5 ಓವರ್ ಗಳಲ್ಲಿ 7 ವಿಕೆಟ್ ಗಳನ್ನು ಕಳೆದುಕೊಂಡು ಗೆಲುವಿನ ದಡ ಸೇರಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 189 ರನ್ ಗಳಿಸಿತು.
ವಿಂಡೀಸ್ನ ಅಗ್ರ ಸರದಿಯಲ್ಲಿ ರೋಸ್ಟನ್ ಚೇಸ್(60 ರನ್, 32 ಎಸೆತ), ಶೈ ಹೋಪ್(55 ರನ್, 39 ಎಸೆತ) ಹಾಗೂ ಶಿಮ್ರೊನ್ ಹೆಟ್ಮೆಯರ್(38 ರನ್, 19 ಎಸೆತ)ಗಮನಾರ್ಹ ಕೊಡುಗೆ ನೀಡಿದರು. 184 ರನ್ಗೆ 5 ವಿಕೆಟ್ ಗಳನ್ನು ಕಳೆದುಕೊಂಡಿದ್ದ ವಿಂಡೀಸ್ 19ನೇ ಓವರ್ ನಲ್ಲಿ ರುದರ್ಫೋರ್ಡ್, ಜೇಸನ್ ಹೋಲ್ಡರ್ ವಿಕೆಟ್ ಗಳನ್ನು ಕಳೆದುಕೊಂಡಿತು. ಹೆಟ್ಮೆಯರ್ ಕೊನೆಯ ಓವರ್ ನಲ್ಲಿ ಔಟಾದರು.
ಆಸ್ಟ್ರೇಲಿಯದ ಪರ ವೇಗದ ಬೌಲರ್ ಬೆನ್ ಡ್ವಾರ್ಶುಯಿಸ್(4-36) ಯಶಸ್ವಿ ಪ್ರದರ್ಶನ ನೀಡಿದರು.
23ರ ಹರೆಯದ ಓವೆನ್ ಕ್ಷಿಪ್ರವಾಗಿ 50 ರನ್(27 ಎಸೆತ, 6 ಸಿಕ್ಸರ್) ಗಳಿಸಿದ್ದಲ್ಲದೆ ಪ್ರಮುಖ ವಿಕೆಟ್ ಉರುಳಿಸಿ ಆಸ್ಟ್ರೇಲಿಯ ತಂಡವು 7 ಎಸೆತಗಳು ಬಾಕಿ ಇರುವಾಗಲೇ ಗೆಲುವು ದಾಖಲಿಸುವಲ್ಲಿ ನೆರವಾದರು.
ಬೌಲಿಂಗ್ ನಲ್ಲಿ ಬೇಗನೆ ಪ್ರಭಾವಬೀರಿದ ಓವೆನ್ 14 ರನ್ ನೀಡಿ 39 ಎಸೆತಗಳಲ್ಲಿ 55 ರನ್ ಗಳಿಸಿ ಇನಿಂಗ್ಸ್ ಆರಂಭಿಸಿದ್ದ ವೆಸ್ಟ್ಇಂಡೀಸ್ ನಾಯಕ ಶೈ ಹೋಪ್ ಅವರ ವಿಕೆಟನ್ನು ಉರುಳಿಸಿದರು.
ರನ್ ಚೇಸ್ ವೇಳೆ ಆಸ್ಟ್ರೇಲಿಯ ತಂಡವು 9ನೇ ಓವರ್ ನಲ್ಲಿ 78 ರನ್ಗೆ 4 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಓವೆನ್ ಅವರು ಕ್ಯಾಮರೂನ್ ಗ್ರೀನ್ ಜೊತೆ 5ನೇ ವಿಕೆಟ್ ನಲ್ಲಿ ಕೇವಲ 40 ಎಸೆತಗಳಲ್ಲಿ 80 ರನ್ ಜೊತೆಯಾಟ ನಡೆಸಿ ಪಂದ್ಯದ ದಿಕ್ಕನ್ನು ಬದಲಿಸಿದರು. ಅಲ್ಝಾರಿ ಜೋಸೆಫ್ ಗೆ ವಿಕೆಟ್ ಒಪ್ಪಿಸುವ ಮೊದಲು ಓವೆನ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಗುಕೇಶ್ ಮೊಟೀಗೆ ವಿಕೆಟ್ ಒಪ್ಪಿಸಿರುವ ಗ್ರೀನ್ 26 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ಗಳ ಸಹಿತ 51 ರನ್ ಸಿಡಿಸಿದರು.
ತನ್ನ ಪಾದಾರ್ಪಣೆ ಪಂದ್ಯದಲ್ಲಿ ಮಿಂಚಿದ ಓವೆನ್ ದಾಖಲೆಯ ಪುಸ್ತಕದಲ್ಲಿ ತನ್ನ ಹೆಸರನ್ನು ನೋಂದಾಯಿಸಿದರು.
ಟಿ20 ಇತಿಹಾಸದಲ್ಲಿ ಪೂರ್ಣ ಸದಸ್ಯ ರಾಷ್ಟ್ರದ ವಿರುದ್ಧ ಆಡಿರುವ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಹಾಗೂ ವಿಕೆಟ್ ಕಬಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾದ ರಾಸ್ಸಿ ವಾನ್ ಡರ್ ಡುಸೆನ್ ಅವರ 16 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು.
ಓವೆನ್ ಅವರು ಐರ್ ಲ್ಯಾಂಡ್ ನ ಸಿಮಿ ಸಿಂಗ್ ಅವರನ್ನು ಸೇರಿಕೊಂಡರು. ಸಿಮಿ ಸಿಂಗ್ ತನ್ನ ಚೊಚ್ಚಲ ಪಂದ್ಯದಲ್ಲಿ ಡಬಲ್ ಸಾಧನೆ ಮಾಡಿದ ಪೂರ್ಣ ಸದಸ್ಯ ರಾಷ್ಟ್ರದ 2ನೇ ಕ್ರಿಕೆಟಿಗನಾಗಿದ್ದಾರೆ. ಸಿಮಿ ಸಿಂಗ್ 2018ರಲ್ಲಿ ನೆದರ್ ಲ್ಯಾಂಡ್ಸ್ ವಿರುದ್ಧ 57 ರನ್ ಗಳಿಸಿದ್ದಲ್ಲದೆ, 3 ವಿಕೆಟ್ ಗಳನ್ನು ಕಬಳಿಸಿದ್ದಾರೆ.
ಓವೆನ್ ಅವರು ಪೂರ್ಣ ಸದಸ್ಯ ರಾಷ್ಟ್ರದ ಆಡಿರುವ ಚೊಚ್ಚಲ ಪಂದ್ಯದಲ್ಲಿ 6 ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಅರ್ಧಶತಕ ಗಳಿಸಿದ 2ನೇ ಆಟಗಾರನಾಗಿದ್ದಾರೆ. ಇಂಗ್ಲೆಂಡ್ ನ ಫಿಲ್ ಸಾಲ್ಟ್ 2022ರಲ್ಲಿ ವೆಸ್ಟ್ಇಂಡೀಸ್ ತಂಡದ ವಿರುದ್ಧ 24 ಎಸೆತಗಳಲ್ಲಿ 57 ರನ್ ಗಳಿಸಿದ್ದರು.
ಓವೆನ್ ಅವರು ರಿಕಿ ಪಾಂಟಿಂಗ್ ಹಾಗೂ ಡೇವಿಡ್ ವಾರ್ನರ್ ನಂತರ ಟಿ20 ಕ್ರಿಕೆಟಿನ ಚೊಚ್ಚಲ ಪಂದ್ಯದಲ್ಲಿ ಅಧರ್ಶತಕ ಗಳಿಸಿದ ಆಸ್ಟ್ರೇಲಿಯದ 3ನೇ ಆಟಗಾರ ಎನಿಸಿಕೊಂಡಿದ್ದಾರೆ.
ಓವೆನ್ 2024-25ರ ಋತುವಿನ ಬಿಗ್ ಬ್ಯಾಶ್ ಲೀಗ್ ನಲ್ಲಿನ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದರು. ಲೀಗ್ ನಲ್ಲಿ ಆಡಿರುವ ಒಟ್ಟು 11 ಪಂದ್ಯಗಳಲ್ಲಿ ಫೈನಲ್ನಲ್ಲಿನ ಶತಕ ಸಹಿತ ಒಟ್ಟು 452 ರನ್ ಗಳಿಸಿದ್ದು, ಆರು ವಿಕೆಟ್ ಗಳನ್ನು ಪಡೆದಿದ್ದರು.
ಓವೆನ್ ಪ್ರತಿಭೆಯನ್ನು ಗುರುತಿಸಿದ ಪಂಜಾಬ್ ಕಿಂಗ್ಸ್ ತಂಡವು ಈ ವರ್ಷದ ಐಪಿಎಲ್ ಮಧ್ಯಭಾಗದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಬದಲಿಗೆ ಆಯ್ಕೆ ಮಾಡಿತು.
ಓವೆನ್ ಅವರು ತನ್ನ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಹಾಗೂ ವಿಕೆಟ್ ಪಡೆದು ಅಪರೂಪದ ಸಾಧನೆಗೈದ ವಿಶ್ವದ 20ನೇ ಆಟಗಾರನಾಗಿದ್ದಾರೆ. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.







