ಆಸ್ಟ್ರೇಲಿಯನ್ ಓಪನ್: ಸಬಲೆಂಕಾ ಫೈನಲ್ ಗೆ, ಕೊಕೊ ಗೌಫ್ ಸವಾಲು ಅಂತ್ಯ
ಸಬಲೆಂಕಾ | Photo: X
ಮೆಲ್ಬರ್ನ್: ಅಮೆರಿಕದ ಯುವ ಆಟಗಾರ್ತಿ ಕೊಕೊ ಗೌಫ್ರನ್ನು ಮಣಿಸಿದ ವಿಶ್ವದ ನಂ.2ನೇ ಆಟಗಾರ್ತಿ ಅರಿನಾ ಸಬಲೆಂಕಾ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಗುರುವಾರ ರಾಡ್ ಲಾವೆರ್ ಅರೆನಾದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಸೆಮಿ ಫೈನಲ್ನಲ್ಲಿ ಬೆಲಾರುಸ್ ಆಟಗಾರ್ತಿ ಸಬಲೆಂಕಾ ನಾಲ್ಕನೇ ಶ್ರೇಯಾಂಕಿತೆ ಗೌಪ್ರನ್ನು ಒಂದು ಗಂಟೆ, 42 ನಿಮಿಷಗಳ ಹೋರಾಟದಲ್ಲಿ 7-6(7/2), 6-4 ಸೆಟ್ ಗಳ ಅಂತರದಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಕಳೆದ ವರ್ಷ ಯುಎಸ್ ಓಪನ್ ಫೈನಲ್ನಲ್ಲಿ ಗೌಫ್ ವಿರುದ್ದದ ಸೋಲಿಗೆ ಸೇಡು ತೀರಿಸಿಕೊಂಡರು.
ಪಂದ್ಯದುದ್ದಕ್ಕೂ ತನ್ನ ಬದ್ಧತೆ ಹಾಗೂ ಕೌಶಲ್ಯವನ್ನು ಪ್ರದರ್ಶಿಸಿದ ಸಬಲೆಂಕಾ ಫೈನಲ್ ಪಂದ್ಯದಲ್ಲಿ ಚೀನಾದ 12ನೇ ಶ್ರೇಯಾಂಕಿತೆ ಝೆಂಗ್ ಕ್ವಿನ್ವೆನ್ ಅಥವಾ ಉಕ್ರೇನಿನ ಕ್ವಾಲಿಫೈಯರ್ ಡಯಾನ ಯಾಸ್ಟ್ರೆಂಸ್ಕಾ ಸವಾಲನ್ನು ಎದುರಿಸಲಿದ್ದಾರೆ.
ಸಬಲೆಂಕಾ ಆಸ್ಟ್ರೇಲಿಯನ್ ಓಪನ್ನಲ್ಲಿ ಫೈನಲ್ಗೆ ತಲುಪುವ ಮೂಲಕ ಸೆರೆನಾ ವಿಲಿಯಮ್ಸ್ ನಂತರ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಸತತವಾಗಿ ಫೈನಲ್ ತಲುಪಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸೆರೆನಾ 2016 ಹಾಗೂ 2017ರಲ್ಲಿ ಈ ಸಾಧನೆ ಮಾಡಿದ್ದರು.
ಸಬಲೆಂಕಾ ಮೆಲ್ಬರ್ನ್ ಪಾರ್ಕ್ನಲ್ಲಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ 2013ರ ನಂತರ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎನಿಸಿಕೊಳ್ಳಲಿದ್ದ್ದಾರೆ. 2013ರಲ್ಲಿ ವಿಕ್ಟೋರಿಯ ಅಝರೆಂಕಾ ಈ ಸಾಧನೆ ಮಾಡಿದ್ದರು.