ಮದ್ಯಪಾನ, ನೃತ್ಯಕ್ಕೆ ಬಲವಂತ : ಹಿಜಾಬ್ ಧರಿಸಿದ ಆಸ್ಟ್ರೇಲಿಯಾದ ಪ್ರಥಮ ಸೆನೆಟ್ ಸದಸ್ಯೆ ಆರೋಪ

PC | X - @SenatorPayman
ಸಿಡ್ನಿ : ಪುರುಷ ಸಹೋದ್ಯೋಗಿಗಳು ತನ್ನನ್ನು ಮದ್ಯಪಾನ ಮಾಡುವಂತೆ ಮತ್ತು ಟೇಬಲ್ ಬಳಿ ನೃತ್ಯ ಮಾಡುವಂತೆ ಬಲಪಡಿಸಿದ್ದಾಗಿ ಆಸ್ಟ್ರೇಲಿಯಾದ ಮುಸ್ಲಿಂ ಸಂಸದೆ ಸದನದ ಸಮಿತಿಗೆ ದೂರು ನೀಡಿದ್ದಾರೆ.
ತಾವು ಮದ್ಯಪಾನ ಮಾಡುವುದಿಲ್ಲವಾದರೂ ಹಿರಿಯ ಸಹೋದ್ಯೋಗಿಯೊಬ್ಬರು ಅಧಿಕೃತ ಸಮಾರಂಭವೊಂದರಲ್ಲಿ ಪಾನಮತ್ತರಾಗಿ ಹಲವು ಅಸಮಂಜಸ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾಗಿ ಸೆನೆಟ್ ಸದಸ್ಯೆ ಫಾತಿಮಾ ಪೇಮನ್ ಆಪಾದಿಸಿದ್ದಾರೆ.
"ಒಂದಷ್ಟು ವೈಸ್ ಸೇವಿಸಿ ಮತ್ತು ನೀವು ವೈನ್ ಟೇಬಲ್ ಬಳಿ ನೃತ್ಯ ಮಾಡುವುದನ್ನು ನಾನು ನೋಡಬೇಕು" ಎಂದು ಹಿರಿಯ ಸದಸ್ಯರು ಹೇಳಿದ್ದಾಗಿ ಎಬಿಸಿ ಪ್ರಸಾರ ಸಂಸ್ಥೆ ಜತೆ ಮಾತನಾಡಿದ ಪೇಪನ್ (30) ವಿವರಿಸಿದ್ದಾರೆ.
"ನಾನು ಒಂದು ಮಿತಿ ಹಾಕಿಕೊಂಡಿದ್ದೇನೆ ಹಾಗೂ ಈ ಬಗ್ಗೆ ಅಧಿಕೃತವಾಗಿ ದೂರು ನೀಡುವುದಾಗಿ ಪ್ರತಿಕ್ರಿಯಿಸಿದೆ" ಎಂದು ಅವರು ಹೇಳಿದ್ದಾರೆ. ಆದರೆ ಈ ಘಟನೆ ಯಾವಾಗ ನಡೆದಿದೆ ಹಾಗೂ ಹಿರಿಯ ಸಹೋದ್ಯೋಗಿ ಯಾರು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.
ಅಫ್ಘಾನಿಸ್ತಾ ಮೂಲದ ಪೇಮನ್ ಆಸ್ಟ್ರೇಲಿಯಾದ ಸಂಸತ್ತಿನೊಳಗೆ ಹಿಜಾಬ್ ಧರಿಸಿದ ಮೊದಲ ಸೆನೆಟ್ ಸದಸ್ಯೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ರಾಜಕೀಯ ಸಿಬ್ಬಂದಿ ಬ್ರಿಟ್ಟನಿ ಹಿಗ್ಗಿಗ್ಸ್ 2021ರಲ್ಲಿ ಸಂಸತ್ ಕಚೇರಿಯ ಒಳಗೇ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆಪಾದಿಸಿದ್ದು, ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಅತ್ಯಧಿಕವಾಗಿ ಮಧ್ಯಪಾನ ಮಾಡುವುದು ಮತ್ತು ಲೈಂಗಿಕ ಕಿರುಕುಳ ನಡೆಯುತ್ತಿದೆ ಎನ್ನುವುದನ್ನು ಆ ಬಳಿಕ ನಡೆದ ತನಿಖಾ ವರದಿ ಬಹಿರಂಗಪಡಿಸಿತ್ತು.







