ರಾಮ ಮಂದಿರ ಉದ್ಘಾಟನೆಗೆ ಅಯೋಧ್ಯೆ ಸಜ್ಜು; ಅಪರಾಹ್ನ 12:20ರಿಂದ 1 ಗಂಟೆ ನಡುವೆ ಪ್ರಾಣ ಪ್ರತಿಷ್ಠಾಪನೆ
13,000 ಭದ್ರತಾ ಸಿಬ್ಬಂದಿಗಳು, ಬಾಂಬ್ ನಿಗ್ರಹ ದಳಗಳ ನಿಯೋಜನೆ
ರಾಮ ಮಂದಿರ | Photo: PTI
ಅಯೋಧ್ಯೆ: ಸೋಮವಾರ ರಾಮ ಮಂದಿರ ಉದ್ಘಾಟನೆಗೆ ಅಯೋಧ್ಯೆ ಸಜ್ಜಾಗಿದೆ. ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ವೈದಿಕ ವಿಧಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳಲಿದ್ದು, ಬಹುಹಂತದ ಭದ್ರತಾ ಯೋಜನೆಯ ಅಂಗವಾಗಿ ನಗರದಾದ್ಯಂತ ಬಿಗು ಭದ್ರತೆಯನ್ನು ಏರ್ಪಡಿಸಲಾಗಿದೆ. ಸುಮಾರು 13,000 ಭದ್ರತಾ ಸಿಬ್ಬಂದಿಗಳು, ಬಾಂಬ್ ನಿಗ್ರಹ ದಳಗಳು ಮತ್ತು ಶ್ವಾನ ದಳಗಳನ್ನು ನಿಯೋಜಿಸಲಾಗಿದೆ.
ಮಂದಿರ ನಿರ್ಮಾಣ ಆಂದೋಲನದ ಭಾಗವಾಗಿದ್ದವರೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ರಂತಹ ಸೆಲೆಬ್ರಿಟಿಗಳು, ಉದ್ಯಮಪತಿಗಳಾದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ, ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್ ಮತ್ತು ಎಂ.ಎಸ್.ಧೋನಿ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನಿತರ ಪಟ್ಟಿಯಲ್ಲಿ ಸೇರಿದ್ದಾರೆ.
ತುರ್ತು ಸಂದರ್ಭಗಳೇನಾದರೂ ಉದ್ಭವಿಸಿದರೆ ಪ್ರತಿಕ್ರಿಯಿಸಲು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (NDRF) ಮಂದಿರದ ಸಮೀಪ ಶಿಬಿರವನ್ನು ಸ್ಥಾಪಿಸಿದೆ.
ಅಪರಾಹ್ನ 12:20ಕ್ಕೆ ಆರಂಭಗೊಳ್ಳುವ ಪ್ರಾಣ ಪ್ರತಿಷ್ಠಾಪನಾ ಸಮಾರಂಭವು ಒಂದು ಗಂಟೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬಳಿಕ ಪ್ರಧಾನಿ ಮೋದಿಯವರು ಸಂತರು ಮತ್ತು ಗಣ್ಯರು ಸೇರಿದಂತೆ 7,000ಕ್ಕೂ ಅಧಿಕ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ನಡುವೆ ಲಕ್ಷಾಂತರ ಜನರು ಟಿವಿ ಮತ್ತು ಇತರ ಆನ್ಲೈನ್ ವೇದಿಕೆಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸುವ ನಿರೀಕ್ಷೆಯಿದೆ. ಹಲವಾರು ರಾಜ್ಯಗಳು ಸೋಮವಾರ ರಜೆಯನ್ನು ಘೋಷಿಸಿದ್ದರೆ, ಕೇಂದ್ರವು ಅರ್ಧ ದಿನದ ರಜೆಯನ್ನು ಪ್ರಕಟಿಸಿದೆ.
ಪೂರ್ವ ಪ್ರಾಣ ಪ್ರತಿಷ್ಠಾಪನಾ ವಿಧಿಗಳು ಜ.16ರಿಂದ ಆರಂಭಗೊಂಡಿದ್ದು, ರವಿವಾರ ಅಂತ್ಯಗೊಂಡಿವೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ 51 ಇಂಚು ಎತ್ತರದ ಬಾಲರಾಮನ ವಿಗ್ರಹವನ್ನು ಗುರುವಾರ ರಾಮ ಮಂದಿರದ ಗರ್ಭಗೃಹದಲ್ಲಿ ಇರಿಸಲಾಗಿದ್ದು, ಅದರ ಮೊದಲ ಚಿತ್ರ ಶುಕ್ರವಾರ ಬಿಡುಗಡೆಗೊಂಡಿತ್ತು.
ರವಿವಾರ ರಾಮ ಮಂದಿರ ಟ್ರಸ್ಟ್ ಬಿಡುಗಡೆಗೊಳಿಸಿದ ನೂತನ ದೃಶ್ಯಾವಳಿಗಳು ಉದ್ಘಾಟನೆಗೆ ಸಜ್ಜಾಗಿರುವ ಮಂದಿರದ ಒಳನೋಟವನ್ನು ತೋರಿಸಿವೆ. ಪ್ರಾಣ ಪ್ರತಿಷ್ಠಾಪನೆಯ ಬಳಿಕ ಮಂಗಳವಾರದಿಂದ ಮಂದಿರವು ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಲಿದೆ.
ಬಿಗು ಭದ್ರತೆ:
ಅಯೋಧ್ಯೆಯಲ್ಲಿ 13,000 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಜೊತೆಗೆ ಪೋಲಿಸರು ಭದ್ರತಾ ವ್ಯವಸ್ಥೆಯನ್ನು ಉತ್ತಮಗೊಳಿಸಲು ಕೃತಕ ಬುದ್ಧಿಮತ್ತೆ ಚಾಲಿತ ಸಿಸಿಟಿವಿಗಳನ್ನು ಬಳಸುತ್ತಿದ್ದಾರೆ. ನಗರದಾದ್ಯಂತ 10,000ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಇವು ದಿನದ 24 ಗಂಟೆಗಳ ಕಾಲ ನಿಗಾಯಿರಿಸಲಿವೆ. ಇವು ಆ್ಯಂಟಿ-ಡ್ರೋನ್ ತಂತ್ರಜ್ಞಾನವನ್ನೂ ಹೊಂದಿವೆ ಎಂದು ಉತ್ತರ ಪ್ರದೇಶದ ಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ ಕುಮಾರ ಅವರು ಸುದ್ದಿಗಾರರಿಗೆ ತಿಳಿಸಿದರು.
ಲತಾ ಮಂಗೇಶ್ಕರ್ ಚೌಕ್ ನಲ್ಲಿ ಕ್ಷಿಪ್ರ ಕ್ರಿಯಾ ಪಡೆ (RPF) ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಪೋಲಿಸರು ಸರಯೂ ನದಿಯಲ್ಲಿ ಆಗಾಗ್ಗೆ ದೋಣಿಗಳ ಮೂಲಕ ಗಸ್ತು ನಿರ್ವಹಿಸುತ್ತಿದ್ದಾರೆ. ಪ್ರಾಣ ಪ್ರತಿಷ್ಠಾಪನೆಗಾಗಿ ಭಕ್ತರು ಮತ್ತು ಗಣ್ಯರು ನಗರಕ್ಕೆ ಆಗಮಿಸತೊಡಗಿದ್ದು,ನೂತನವಾಗಿ ಉದ್ಘಾಟನೆಗೊಂಡಿರುವ ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ನಿಗ್ರಹ ಮತ್ತು ಶ್ವಾನ ದಳಗಳನ್ನು ನಿಯೋಜಿಸಲಾಗಿದೆ.
ಸಂಚಾರ ನಿರ್ಬಂಧ, ಪಾರ್ಕಿಂಗ್ ವ್ಯವಸ್ಥೆ
ಪೋಲಿಸರು ಅಯೋಧ್ಯೆಯಲ್ಲಿ ಸಂಚಾರ ನಿರ್ಬಂಧಗಳನ್ನು ಹೇರಿದ್ದು, ಹಲವೆಡೆಗಳಲ್ಲಿ ಸಂಚಾರ ಮಾರ್ಗಗಳನ್ನು ಬದಲಿಸಲಾಗಿದೆ. ಸೋಮವಾರದಿಂದ ಅನುಮತಿಯನ್ನು ಹೊಂದಿರುವ ವಾಹನಗಳು ಮಾತ್ರ ನಗರವನ್ನು ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.
ಪ್ರತಿ ಅಡ್ಡರಸ್ತೆಯಲ್ಲಿಯೂ ಮುಳ್ಳುತಂತಿಗಳಿಂದ ಕೂಡಿದ ಚಲಿಸಬಲ್ಲ ಬ್ಯಾರಿಕೇಡ್ ಗಳನ್ನು ಇರಿಸಲಾಗಿದ್ದು, ಪೋಲಿಸರು ಇವುಗಳನ್ನು ವಿಶೇಷವಾಗಿ ವಿವಿಐಪಿಗಳ ಚಲನವಲನಗಳ ಸಂದರ್ಭದಲ್ಲಿ ಸಂಚಾರವನ್ನು ನಿಯಂತ್ರಿಸಲು ಬಳಸುತ್ತಿದ್ದಾರೆ.
ಈ ನಡುವೆ ಸಂದರ್ಶಕರ ಸುಗಮ ಪ್ರವೇಶ ಮತ್ತು ನಿರ್ಗಮನಕ್ಕಾಗಿ ಉತ್ತರ ಪ್ರದೇಶ ಸರಕಾರವು ನಗರದ 51 ನಿಯೋಜಿತ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡಿದೆ. 22,825 ವಾಹನಗಳ ನಿಲುಗಡೆಗೆ ಸ್ಥಳಾವಕಾಶವನ್ನು ಕಲ್ಪಿಸಲಾಗಿದ್ದು,ಇವು ನಿರಂತರವಾಗಿ ಡ್ರೋನ್ ಕಣ್ಗಾವಲಿನಲ್ಲಿರಲಿವೆ.
ಈ ಪಾರ್ಕಿಂಗ್ ವ್ಯವಸ್ಥೆಗಳು ಸರಕಾರಿ,ಖಾಸಗಿ ಮತ್ತು ಪ್ರವಾಸೋದ್ಯಮ ಇಲಾಖೆಗೆ ಸೇರಿದ ಜಮೀನುಗಳಲ್ಲಿವೆ. ಇದಲ್ಲದೆ ನಗರದಲ್ಲಿ ನಿರ್ಮಿಸಲಾಗಿರುವ ಮಲ್ಟಿಲೆವೆಲ್ ಪಾರ್ಕಿಂಗ್ ನಲ್ಲಿಯೂ ವಾಹನಗಳನ್ನು ನಿಲ್ಲಿಸಬಹುದು.
ವಿವಿಐಪಿಗಳ 1,225ಕ್ಕೂ ಅಧಿಕ ವಾಹನಗಳಿಗಾಗಿ ರಾಮಪಥ ಮತ್ತು ಭಕ್ತಿಪಥಗಳಲ್ಲಿ ಆರು ಪಾರ್ಕಿಂಗ್ ಸ್ಥಳಗಳನ್ನು ಮೀಸಲಿರಿಸಲಾಗಿದೆ. 10,000ಕ್ಕೂ ಅಧಿಕ ವಿಐಪಿ ವಾಹನಗಳಿಗಾಗಿ ಧರ್ಮಪಥ ಮಾರ್ಗ ಮತ್ತು ಪರಿಕ್ರಮ ಮಾರ್ಗಗಳಲ್ಲಿ ಒಂಭತ್ತು ಪಾರ್ಕಿಂಗ್ ಸ್ಥಳಗಳನ್ನು ಕಾದಿರಿಸಲಾಗಿದೆ.
ಪೋಲಿಸ್ ಪಡೆಗಳಿಗಾಗಿ ರಾಷ್ಟ್ರೀಯ ಹೆದ್ದಾರಿ 27ರಲ್ಲಿ ಎಂಟು ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದ್ದು, ಇಲ್ಲಿ 2,000ಕ್ಕೂ ಅಧಿಕ ಪೋಲಿಸ್ ವಾಹನಗಳನ್ನು ನಿಲ್ಲಿಸಬಹುದಾಗಿದೆ. ಪಾರ್ಕಿಂಗ್ ಸ್ಥಳಗಳ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ವ್ಯವಸ್ಥೆಗಳು:
ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ಪರಮಾಣು ದಾಳಿಗಳು, ಮುಳುಗುವ ಘಟನೆಗಳು ಮತ್ತು ಭೂಕಂಪದಂತಹ ವಿಪತ್ತುಗಳನ್ನು ಎದುರಿಸಲು ತರಬೇತಿ ಪಡೆದಿರುವ ಹಲವಾರು NDRF ತಂಡಗಳನ್ನು ನಿಯೋಜಿಸಲಾಗಿದೆ.
ತುರ್ತು ಆರೋಗ್ಯ ವ್ಯವಸ್ಥೆ:
ಉತ್ತರ ಭಾರತವು ತೀವ್ರ ಶೀತ ಮಾರುತದಿಂದಾಗಿ ಚಳಿಯಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ ಅಯೋಧ್ಯೆ ಆಡಳಿತವು ತುರ್ತು ಆರೋಗ್ಯ ಸ್ಥಿತಿಗಳನ್ನು ನಿಭಾಯಿಸಲು ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ನಗರದಲ್ಲಿಯ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.
ಅಲಂಕೃತ ಅಯೋಧ್ಯೆ ಮತ್ತು ರಾಮ ಮಂದಿರ:
ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಯೋಧ್ಯೆ ನಗರವು ಶೃಂಗಾರಗೊಂಡಿದ್ದು, ಮಂದಿರವನ್ನು ಭಾರೀ ಸಂಖ್ಯೆಯ ಹೂವುಗಳು ಮತ್ತು ವಿಶೇಷ ದೀಪಗಳೊಂದಿಗೆ ಅಲಂಕರಿಸಲಾಗಿದೆ.
ಫ್ಲೈಓವರ್ ಗಳಲ್ಲಿಯ ಬೀದಿ ದೀಪಗಳನ್ನು ಶ್ರೀರಾಮನನ್ನು ಒಳಗೊಂಡಿರುವ ಕಲಾಕೃತಿಗಳಿಂದ ಅಲಂಕರಿಸಲಾಗಿದೆ. ಇವುಗಳಲ್ಲಿ ಬಿಲ್ಲು ಮತ್ತು ಬಾಣದ ಕಟೌಟ್ ಗಳೂ ಸೇರಿವೆ. ರಾಮ ಫಿರ್ ಲೌಟೇಂಗೆ,ವಿರಾಜೇಂಗೆ ಶ್ರೀರಾಮ ಇತ್ಯಾದಿ ಘೋಷಣೆಗಳುಳ್ಳ ಭಿತ್ತಿಪತ್ರಗಳು ನಗರದಾದ್ಯಂತ ಹರಡಿಕೊಂಡಿವೆ.
ಉಡುಗೊರೆಗಳ ಮಹಾಪೂರ:
ಮಂದಿರ ಉದ್ಘಾಟನೆಗಾಗಿ ವಿವಿಧೆಡೆಗಳಿಂದ ಉಡುಗೊರೆಗಳ ಮಹಾಪೂರವೇ ಹರಿದು ಬರುತ್ತಿದೆ. ಶ್ರೀರಾಮನ ಚಿತ್ರಗಳುಳ್ಳ ಬಳೆಗಳು, 56 ವಿಧಗಳ ‘ಪೇಠಾ (ಸಿಹಿ)’, ಪ್ರಾಣ ಪ್ರತಿಷ್ಠಾಪನೆಗೆ ಅಗತ್ಯ ಪರಿಕರಗಳು ಇತ್ಯಾದಿಗಳು ಇವುಗಳಲ್ಲಿ ಸೇರಿವೆ.
ಸೀತಾದೇವಿಯ ತವರು ನೇಪಾಳದ ಜನಕಪುರದಿಂದಲೂ 3,000ಕ್ಕೂ ಅಧಿಕ ಉಡುಗೊರೆಗಳು ಅಯೋಧ್ಯೆಯನ್ನು ತಲುಪಿವೆ. ಶ್ರೀಲಂಕಾದ ನಿಯೋಗವೊಂದು ಅಶೋಕ ವಾಟಿಕಾದಿಂದ ವಿಶೇಷ ಉಡುಗೊರೆಯನ್ನು ತಂದಿದೆ.