‘ಆಯುಷ್ಮಾನ್ ಭಾರತ್’ ಯೋಜನೆಯಿಂದ ಆರೋಗ್ಯ ಕ್ರಾಂತಿ : ಪ್ರಧಾನಿ ಮೋದಿ

ನರೇಂದ್ರ ಮೋದಿ | PC : PTI
ಹೊಸದಿಲ್ಲಿ,ಸೆ.23: ಆಯುಷ್ಮಾನ್ ಭಾರತ್ ಯೋಜನೆಯು ಸಾರ್ವಜನಿಕ ಆರೋಗ್ಯಪಾಲನೆ ವ್ಯವಸ್ಥೆಯಲ್ಲಿ ಕ್ರಾಂತಿಯನ್ನು ಉಂಟು ಮಾಡಿದೆ ಹಾಗೂ ಅದರ ಫಲಾನುಭವಿಗಳಿಗೆ ಆರ್ಥಿಕ ಸಂರಕ್ಷಣೆ ಹಾಗೂ ಘನತೆಯನ್ನು ಖಾತರಿಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
2018ರ ಸೆಪ್ಟೆಂಬರ್ 23ರಂದು ಆರಂಭಗೊಂಡ ಆಯುಷ್ಮಾನ್ ಭಾರತ್ ಯೋಜನೆಯ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ ಈ ವಿಷಯ ತಿಳಿಸಿದ್ದಾರೆ.
‘‘ಇಂದು ಆಯುಷ್ಮಾನ್ ಭಾರತ್ ಯೋಜನೆಗೆ 7 ವರ್ಷ ತುಂಬಿದೆ. ಭವಿಷ್ಯದ ಅವಶ್ಯಕತೆಗಳ ನಿರೀಕ್ಷೆಯೊಂದಿಗೆ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ ಹಾಗೂ ಜನಸಾಮಾನ್ಯರ ಕೈಗೆಟಕುವಂತಹ ಶ್ರೇಷ್ಠ ಗುಣಮಟ್ಟ ಆರೋಗ್ಯ ಪಾಲನೆಯನ್ನು ಖಾತರಿಪಡಿಸುತ್ತಿರುವುದಕ್ಕೆ ಧನ್ಯವಾದ ’’ಎಂದವರು ಹೇಳಿದ್ದಾರೆ.
ಅನುಕಂಪ ಹಾಗೂ ತಂತ್ರಜ್ಞಾನವು ಮಾನವನ ಸಬಲೀಕರಣವನ್ನು ಮುಂದಕ್ಕೊಯ್ಯುತ್ತದೆ ಎಂಬುದನ್ನು ಭಾರತವು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದರು.
ದೆೇಶಾದ್ಯಂತ 55 ಕೋಟಿ ಭಾರತೀಯರನ್ನು ಆಯುಷ್ಮಾನ್ ಭಾರತ್ ಯೋಜನೆಯಡಿಗೆ ತರುವ ಉದ್ದೇಶವನ್ನು ಸರಕಾರ ಹೊಂದಿದೆ. ಈವರೆಗೆ 42 ಕೋಟಿ ಆಯುಷ್ಮಾನ್ ಕಾರ್ಡ್ಗಳನ್ನು ವಿತರಿಸಲಾಗಿದೆ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವೈದ್ಯಕೀಯ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತ್, ಬಡವರು ಹಾಗೂ 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ವಾರ್ಷಿಕವಾಗಿ 5 ಲಕ್ಷ ರೂ.ವರೆಗೆ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುತ್ತದೆ.







