ಅಝಂಖಾನ್, ಪತ್ನಿ, ಪುತ್ರನಿಗೆ 7 ವರ್ಷ ಕಾರಾಗೃಹ ಶಿಕ್ಷೆ
2019ರ ನಕಲಿ ಜನನ ಪ್ರಮಾಣಪತ್ರ ಪ್ರಕರಣ

ಅಝಂ ಖಾನ್ (source: PTI)
ಹೊಸದಿಲ್ಲಿ: 2019ರ ನಕಲಿ ಜನನ ಪ್ರಮಾಣ ಪತ್ರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್, ಪತ್ನಿ ತಝೀನ್ ಫಾತಿಮಾ ಹಾಗೂ ಪುತ್ರ ಅಬ್ದುಲ್ ಅಝಂ ದೋಷಿಗಳು ಎಂದು ರಾಮ್ಪುರ ನ್ಯಾಯಾಲಯ ಬುಧವಾರ ಘೋಷಿಸಿದೆ. ಅಲ್ಲದೆ, ಅವರಿಗೆ ತಲಾ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
‘‘ನ್ಯಾಯಾಲಯ ತೀರ್ಪು ನೀಡಿದ ಬಳಿಕ ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳಲಾಯಿತು. ಅನಂತರ ಕಾರಾಗೃಹಕ್ಕೆ ಕಳುಹಿಸಲಾಯಿತು’’ ಎಂದು ಪ್ರಾಸಿಕ್ಯೂಷನ್ ಅನ್ನು ಪ್ರತಿನಿಧಿಸಿದ್ದ ಮಾಜಿ ಜಿಲ್ಲಾ ಸರಕಾರಿ ನ್ಯಾಯವಾದಿ ಅರುಣ್ ಪ್ರಕಾಶ್ ಸಕ್ಸೇನಾ ತಿಳಿಸಿದ್ದಾರೆ.
ಎಂಪಿ-ಎಂಎಲ್ಎ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಶೋಬಿತ್ ಬನ್ಸಾಲ್ ಅವರು ಮೂವರು ದೋಷಿಗಳಿಗೆ ಗರಿಷ್ಠ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.
ಬಿಜೆಪಿ ಶಾಸಕ ಆಕಾಶ್ ಸಕ್ಸೇನಾ ಅವರು 2019 ಜನವರಿ 3ರಂದು ರಾಮ್ಪುರದ ಗಂಜ್ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಎಫ್ ಐ ಆರ್ ದಾಖಲಿಸಿದ್ದರು. ಲಕ್ನೋ ಹಾಗೂ ರಾಮ್ಪುರದಿಂದ ಎರಡು ನಕಲಿ ಜನನ ಪ್ರಮಾಣಪತ್ರವನ್ನು ಪಡೆಯಲು ಪುತ್ರ ಅಬ್ದುಲ್ಲಾ ಅಝಂಗೆ ಅಝಂ ಖಾನ್ ಹಾಗೂ ಪತ್ನಿ ತಝೀನ್ ಪಾತಿಮಾ ಅವರು ನೆರವು ನೀಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ರಾಮ್ಪುರ ನಗರಪಾಲಿಕೆ ನೀಡಿದ ಪ್ರಮಾಣ ಪತ್ರದಲ್ಲಿ ಅಬ್ದುಲ್ ಅಝಂ ಅವರ ಜನನ ದಿನಾಂಕ 1993 ಜನವರಿ 1 ಎಂದು ಉಲ್ಲೇಖಿಸಲಾಗಿದೆ. ಆದರೆ, ಲಕ್ನೊದಿಂದ ತೆಗೆದ ಇನ್ನೊಂದು ಪ್ರಮಾಣ ಪತ್ರದಲ್ಲಿ ಅವರು 1990 ಸೆಪ್ಟಂಬರ್ 30ರಂದು ಜನಿಸಿದ್ದಾರೆ ಎಂದು ಹೇಳಲಾಗಿದೆ ಎಂದು ಆರೋಪಪಟ್ಟಿ ತಿಳಿಸಿತ್ತು.







