ತೆಲಂಗಾಣ ಸಂಪುಟಕ್ಕೆ ಅಝರುದ್ದೀನ್ ಇಂದು ಸೇರ್ಪಡೆ ನಿರೀಕ್ಷೆ

PC: x.com/karunasri4BJP
ಹೈದ್ರಾಬಾದ್: ನವೆಂಬರ್ 11ರಂದು ಪ್ರಮುಖ ಜ್ಯೂಬಿಲಿ ಹಿಲ್ಸ್ ವಿಧಾನಸಭಾ ಉಪಚುನಾವಣೆ ನಡೆಯುವ ಹಿನ್ನೆಲೆಯಲ್ಲಿ, ತೆಲಂಗಾಣ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮೊಹ್ಮದ್ ಅಝರುದ್ದೀನ್ ಅವರನ್ನು ರೇವಂತ್ ರೆಡ್ಡಿ ಸಂಪುಟಕ್ಕೆ ಸೇರ್ಪಡೆಗೊಳಿಸಲು ಅಖಿಲ ಭಾರತ ಕಾಂಗ್ರೆಸ್ ಸಮ್ಮತಿ ನೀಡಿದೆ. ಜ್ಯೂಬಿಲಿ ಹಿಲ್ಸ್ ಕ್ಷೇತ್ರದ 3.98 ಲಕ್ಷ ಮತದಾರರ ಪೈಕಿ ಶೇಕಡ 25ರಷ್ಟು ಮಂದಿ ಮುಸ್ಲಿಮರು ಇರುವ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟ್ ತಾರೆಯ ಸೇರ್ಪಡೆಯನ್ನು ಕಾರ್ಯತಂತ್ರದ ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.
ಶುಕ್ರವಾರ ಮಧ್ಯಾಹ್ನ 12.15ಕ್ಕೆ ನಡೆಯುವ ಸಮಾರಂಭದಲ್ಲಿ ಅಝರುದ್ದೀನ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಏಕೈಕ ಸಚಿವ ಎಂಬ ಹೆಗ್ಗಳಿಕೆ ಅವರದ್ದಾಗಲಿದೆ. ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳ ಪೈಕಿ ಒಂದನ್ನು ಭರ್ತಿ ಮಾಡಲಾಗುತ್ತಿದೆ.
ಆದರೆ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಲ್ಲದ ಅಝರುದ್ದೀನ್ ಅವರು ಆರು ತಿಂಗಳ ಒಳಗಾಗಿ ವಿಧಾನಸಭೆ ಅಥವಾ ಪರಿಷತ್ ಸದಸ್ಯರಾಗಿ ಆಯ್ಕೆಯಗಬೇಕಿದೆ. ಇಲ್ಲದಿದ್ದರೆ ಅವರು ಸಚಿವ ಪದವಿ ಕಳೆದುಕೊಳ್ಳಬೇಕಾಗುತ್ತದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಜ್ಯೂಬಿಲಿ ಹಿಲ್ಸ್ ಕ್ಷೇತ್ರದಿಂದ ಸ್ಪರ್ಧಿಸಿ ಅವರು ಸೋಲು ಅನುಭವಿಸಿದ್ದರು.
ಕಾಂಗ್ರೆಸ್ ಸರ್ಕಾರ ಅವರನ್ನು ರಾಜ್ಯಪಾಲರ ಕೋಟಾದಡಿಯಲ್ಲಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ಶಿಫಾರಸ್ಸು ಮಾಡಿದ್ದು, ರಾಜಭವನ ಇದನ್ನು ಅನುಮೋದಿಸಬೇಕಿದೆ. ಅಝರುದ್ದೀನ್ ಹಾಗೂ ತೆಲಂಗಾಣ ಜನ ಸಮಿತಿ ಅಧ್ಯಕ್ಷ ಕೊಂದಂಡರಾಮ್ ಅವರ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ಬಾಕಿ ಇರುವ ಹಿನ್ನೆಲೆಯಲ್ಲಿ ರಾಜ್ಯಪಾಲ ಜಿಶು ದೇವ್ ವರ್ಮಾ, ಈ ಪ್ರಸ್ತಾವವನ್ನು ಅನುಮೋದಿಸಿಲ್ಲ ಎಂದು ಮೂಲಗಳು ಹೇಳಿವೆ.







