2.5 ಲಕ್ಷ ಬಾಲಕಿಯರ ಶಿಕ್ಷಣಕ್ಕೆ ಅಝೀಂ ಪ್ರೇಮ್ ಜಿ ಫೌಂಡೇಶನ್ನಿಂದ 2,250 ಕೋಟಿ ರೂ. ದೇಣಿಗೆ

Photo| PTI
ಬೆಂಗಳೂರು: ಶಾಲಾ ನಂತರದ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರಿಗೆ ಅಝೀಂ ಪ್ರೇಮ್ ಜಿ ಫೌಂಡೇಶನ್ ಗುರುವಾರ ಅಝೀಂ ಪ್ರೇಮ್ ಜಿ ವಿದ್ಯಾರ್ಥಿ ವೇತನವನ್ನು ಘೋಷಿಸಿದೆ.
ಅಝೀಂ ಪ್ರೇಮ್ ಜಿ ಫೌಂಡೇಶನ್ 18 ರಾಜ್ಯಗಳಲ್ಲಿ 2.5 ಲಕ್ಷ ಬಾಲಕಿಯರಿಗೆ ಉನ್ನತ ಶಿಕ್ಷಣ ಪಡೆಯಲು ಸಹಾಯ ಮಾಡಲಿದೆ. ಅದಕ್ಕಾಗಿ 2,250 ಕೋಟಿ ರೂ. ದೇಣಿಗೆ ನೀಡುತ್ತಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಅಝೀಂ ಪ್ರೇಮ್ ಜಿ ಫೌಂಡೇಶನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುರಾಗ್ ಬೆಹರ್, ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಲು ಅವಕಾಶ ನೀಡುವುದು ವಿದ್ಯಾರ್ಥಿ ವೇತನ ನೀಡುವುದರ ಮೂಲ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ಗಢ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ರಾಜಸ್ಥಾನ, ಸಿಕ್ಕಿಂ, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ವಿದ್ಯಾರ್ಥಿ ವೇತನವನ್ನು ನೀಡಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ.
ಸರಕಾರಿ ಶಾಲೆಯಿಂದ 10 ಮತ್ತು 12ನೇ ತರಗತಿಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿನಿಯರು ಅಝೀಂ ಪ್ರೇಮ್ ಜಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಅಝೀಂ ಪ್ರೇಮ್ ಜಿ ಫೌಂಡೇಶನ್ 2.5 ಲಕ್ಷ ವಿದ್ಯಾರ್ಥಿನಿಯರಿಗೆ ವರ್ಷಕ್ಕೆ 30,000ರೂ. ನೀಡುತ್ತದೆ. ಇದನ್ನು ಎರಡು ಕಂತುಗಳಲ್ಲಿ ಪಾವತಿಸಲಾಗುತ್ತದೆ. ಇದರ ಒಟ್ಟು ವೆಚ್ಚ ವರ್ಷಕ್ಕೆ 750 ಕೋಟಿ ರೂ. ಆಗಿರುತ್ತದೆ. ಮೂರು ವರ್ಷಗಳ ಪದವಿ ಕಾರ್ಯಕ್ರಮದಲ್ಲಿ ಒಟ್ಟು 2,250 ಕೋಟಿ ರೂ.ನೀಡಲಾಗುತ್ತದೆ. ಅಝೀಂ ಪ್ರೇಮ್ ಜಿ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿನಿಗೆ ಮೂರು ವರ್ಷಗಳ ಪದವಿ ಅವಧಿಯಲ್ಲಿ 90,000ರೂ. ನೀಡಲಾಗುತ್ತದೆ.







