ಶೂ ಎಸೆದ ವಕೀಲನ ವಿರುದ್ಧ ಕ್ರಮ ಕೈಗೊಳ್ಳದಿರಲು ತಕ್ಷಣವೇ ನಿರ್ಧರಿಸಿದ್ದೆ: ನ್ಯಾ.ಗವಾಯಿ

ಬಿ.ಆರ್.ಗವಾಯಿ | Photo Credit ; PTI
ಹೊಸದಿಲ್ಲಿ,ನ.26: ಕಳೆದ ತಿಂಗಳು ಸುಪ್ರೀಂಕೋರ್ಟ್ನ ಒಳಗೆ ತನ್ನ ಮೇಲೆ ನ್ಯಾಯವಾದಿಯೊಬ್ಬ ಶೂ ಎಸೆಯಲು ಯತ್ನಿಸಿದ ಹೊರತಾಗಿಯೂ, ನನ್ನ ಸಹಜಪ್ರವೃತ್ತಿಯಿಂದಾಗಿ ತಾನು ನ್ಯಾಯಾಲಯದಲ್ಲಿ ವಿಚಾರಣಾ ಕಲಾಪವನ್ನು ಮುಂದುವರಿಸಲು ನಿರ್ಧರಿಸಿದ್ದೆ ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಬುಧವಾರ ತಿಳಿಸಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ‘‘ನಾನು ಬೆಳೆದುಬಂದ ರೀತಿಯಿಂದಾಗಿ ನಾನು ಈ ನಿರ್ಧಾರವನ್ನು ಕೈಗೊಂಡೆ. ನ್ಯಾಯಾಲಯದಲ್ಲಿ ನಾನು ಆಡಿದೆನ್ನಲಾದ ಮಾತುಗಳಿಗಾಗಿ ಅಥವಾ ನ್ಯಾಯಾಲಯದಲ್ಲಿ ನನ್ನ ವ್ಯಕ್ತಪಡಿಸಿದ ಅಭಿಪ್ರಾಯಗಳಿಗಾಗಿ ಹೀಗೆ ಮಾಡಲಾಯಿತೇ ಎಂಬುದು ನನಗೆ ಗೊತ್ತಿಲ್ಲ. ಆದಾಗ್ಯೂ ನಾನು ವಿಚಾರಣಾ ಕಲಾಪವನ್ನು ಮುಂದುವರಿಸಬೇಕೆಂಬ ನಿರ್ಧರಿಸಿದೆ. ಈ ಕುರಿತು ನಾನು ಕ್ಷಣ ಮಾತ್ರದಲ್ಲಿ ಈ ನಿರ್ಧಾರವನ್ನು ಕೈಗೊಂಡೆ ’’ಎಂದವರು ಹೇಳಿದರು.
ಮಧ್ಯಪ್ರದೇಶದ ಖಜುರಾಹೋದಲ್ಲಿರುವ ಜವಾರಿ ದೇವಾಲಯದಲ್ಲಿರುವ ವಿಷ್ಣು ವಿಗ್ರಹದ ಪುನರ್ಸ್ಥಾಪನೆಗೆ ಕೋರಿ ನ್ಯಾಯವಾದಿ ರಾಕೇಶ್ ಕಿಶೋರ್ ಎಂಬಾತ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (ಪಿಐಎಲ್)ಯನ್ನು ಆಗ ಸಿಜೆಐ ಆಗಿದ್ದ ಗವಾಯಿ ಅವರು ತಿರಸ್ಕರಿಸಿದ್ದರು. ಈ ಸಂದರ್ಭದಲ್ಲಿ ಅವರೆಡೆಗೆ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿದ್ದ. ಆದರೆ ಭದ್ರತಾ ಸಿಬ್ಬಂದಿ ತಕ್ಷಣವೇ ಮಧ್ಯಪ್ರವೇಶಿಸಿ ಆತನನ್ನು ತಡೆದಿದ್ದರು,
ಆದರೆ ಗವಾಯಿ ಅವರು ಅದನ್ನು ನಿರ್ಲಕ್ಷಿಸಿ ನ್ಯಾಯಾಲಯದ ಕಲಾಪವನ್ನು ಮುಂದುವರಿಸಲು ಸೂಚಿಸಿದರು. ಇಂತಹ ಕ್ಷುಲ್ಲಕ ವಿಷಯಗಳಿಗೆ ನ್ಯಾಯಾಲಯ ವಿಚಲಿತವಾಗಕೂಡದೆಂದು ಅವರು ಹೇಳಿದ್ದರು.
ಭದ್ರತಾ ಸಿಬ್ಬಂದಿ ಕಿಶೋರ್ ನನ್ನು ಹೊರಗೊಯ್ಯುತ್ತಿದ್ದಾಗ, ಆತ ‘ಸನಾತನ್ ಕಾ ಅಪಮಾನ್ ನಹೀ ಸಹೇಂಗೇ’ (ಸನಾತನ ಧರ್ಮದ ಅಪಮಾನವನ್ನು ಸಹಿಸುವುದಿಲ್ಲ) ಎಂಬ ಘೋಷಣೆಯನ್ನು ಕೂಗಿದ್ದನು.
ಇದೊದು ನ್ಯಾಯಾಂಗ ನಿಂದನೆಯ ಘಟನೆಯಾಗಿದ್ದರೂ, ಆರೋಪಿ ನ್ಯಾಯವಾದಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸಿಜೆಐ ಸೂಚಿಸಿದರು. ತರುವಾಯ ಭಾರತೀಯ ನ್ಯಾಯವಾದಿಗಳ ಮಂಡಳಿಯು ಕಿಶೋರ್ ನ ವಕೀಲಿ ವೃತ್ತಿಯ ಪರವಾನಗಿಯನ್ನು ರದ್ದುಪಡಿಸಿತ್ತು.







