ಬಾಬಾ ಸಿದ್ದೀಕ್ ರ ಫೋನ್ ನಂಬರ್ ಪಡೆಯಲು ಯತ್ನ: ಬ್ಯಾಂಕ್ ಉದ್ಯೋಗಿ ಬಂಧನ
ಬ್ಯಾಂಕ್ ಖಾತೆಯಿಂದ ಹಣ ತೆಗೆಯಲು ಯತ್ನಿಸಿದ ಆರೋಪ

ಬಾಬಾ ಸಿದ್ದೀಕ್ | PTI
ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ)ದ ದಿವಂಗತ ನಾಯಕ ಬಾಬಾ ಸಿದ್ದೀಕ್ ರ ಬ್ಯಾಂಕ್ ಖಾತೆಯಿಂದ ಹಣವನ್ನು ತೆಗೆಯುವುದಕ್ಕಾಗಿ ಅವರ ಮೊಬೈಲ್ ನಂಬರನ್ನು ಪಡೆಯಲು ಯತ್ನಿಸಿದ ಆರೋಪದಲ್ಲಿ ಮಾಜಿ ಬ್ಯಾಂಕ್ ಉದ್ಯೋಗಿಯೊಬ್ಬನನ್ನು ದಿಲ್ಲಿಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.
ಎಂಬಿಎ ಪದವಿ ಹೊಂದಿರುವ 48 ವರ್ಷದ ವಿವೇಕ್ ಸಭ್ರೆವಾಲ್ ನನ್ನು ರವಿವಾರ ರಾತ್ರಿ ರಾಷ್ಟ್ರ ರಾಜಧಾನಿಯ ಬುರಾರಿ ಎಂಬಲ್ಲಿಂದ ಬಂಧಿಸಲಾಯಿತು ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.
ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಝಿಯಾವುದ್ದೀನ್ ಸಿದ್ದೀಕ್ ರನ್ನು ಹಂತಕರು 2024 ಅಕ್ಟೋಬರ್ 12ರಂದು ಗುಂಡು ಹಾರಿಸಿ ಕೊಂದಿದ್ದರು.
ಅವರ ಸಾವಿನ ಬಳಿಕ, ಅವರ ಮೊಬೈಲ್ ಸಂಖ್ಯೆಯನ್ನು ಸಕ್ರಿಯವಾಗಿಡಲು ಅವರ ಕುಟುಂಬವು ಬಯಸಿತ್ತು ಎಂದು ಅವರ ಪುತ್ರಿ ಡಾ. ಅರ್ಶಿಯಾ ಸಿದ್ದೀಕ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಹಾಗಾಗಿ, ನನ್ನ ತಾಯಿ ಶಹ್ಝೀನ್ ಸಿದ್ದೀಕ್ ಆ ಮೊಬೈಲ್ ಸಂಖ್ಯೆಯ ‘ಅಧಿಕೃತ ಸಹಿದಾರರದಾರು’ ಎಂದು ಅವರು ಹೇಳಿದ್ದಾರೆ.
‘ಅಧಿಕೃತ ಸಹಿದಾರ’ರನ್ನು ಬದಲಿಸಲು ಕೋರಿ ಸಲ್ಲಿಕೆಯಾಗಿರುವ ಅರ್ಜಿಯೊಂದರ ಬಗ್ಗೆ ವೊಡಾಫೋನ್ ಐಡಿಯ ಜೂನ್ 25ರಂದು ನನ್ನ ತಾಯಿಗೆ ಇಮೇಲ್ ಕಳಹಿಸಿತು. ಶಹ್ಝೀನ್ ಸಿದ್ದೀಕ್ ರ ಇಮೇಲ್ ವಿಳಾಸ (ಒಂದು ಅಕ್ಷರದ ವ್ಯತ್ಯಾಸ)ವನ್ನೇ ಹೋಲುವ ಇಮೇಲ್ ವಿಳಾಸದಿಂದ ಅರ್ಜಿ ಸಲ್ಲಿಸಲಾಗಿತ್ತು ಎನ್ನುವುದು ಬಳಿಕ ತಿಳಿದುಬಂತು.
ಅಪಾಯವನ್ನು ಗ್ರಹಿಸಿದ ಅರ್ಶಿಯಾ ಸಿದ್ದೀಕ್ ಪೊಲೀಸರಿಗೆ ದೂರು ಸಲ್ಲಿಸಿದರು. ಫೋನ್ ಸಂಖ್ಯೆಯ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಯಿತು.







