ಮುಂಬೈ : ನಾಲ್ಕನೆಯ ಮಹಡಿಯಿಂದ ಕೆಳಗೆ ಬಿದ್ದರೂ ಜೀವಂತವಾಗಿದ್ದ ಮಗು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಮೃತ್ಯು!

ಸಾಂದರ್ಭಿಕ ಚಿತ್ರ | PC : PTI
ಮುಂಬೈ: ನಾಲ್ಕನೆಯ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದರೂ ಜೀವಂತವಾಗಿದ್ದ 16 ತಿಂಗಳ ಮಗುವೊಂದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಇದು ಇಂತಹ ಎರಡನೆ ಘಟನೆಯಾಗಿದೆ ಎಂದು Times of India ವರದಿ ಮಾಡಿದೆ.
ಗುರುವಾರ ಮಧ್ಯಾಹ್ನ ಸುಮಾರು 1.30ರ ವೇಳೆ ಪೂರ್ವ ನಲಸೋಪಾರದಲ್ಲಿರುವ ಫಾತಿಮಾ ಮಂಝಿಲ್ ನಲ್ಲಿನ ನಾಲ್ಕನೆ ಮಹಡಿಯ ಫ್ಲ್ಯಾಟ್ ನ ತೆರೆದ ಬಾಲ್ಕನಿಯಿಂದ ಮಗುವೊಂದು ಕೆಳಗೆ ಬಿದ್ದು, ಪವಾಡಸದೃಶವಾಗಿ ಬದುಕುಳಿದಿತ್ತು. ತಕ್ಷಣವೇ ಕುಟುಂಬವು ಗಾಯಗೊಂಡಿದ್ದ ಮಗುವನ್ನು ಆ ಪ್ರದೇಶದಲ್ಲಿರುವ ಖಾಸಗಿ ಆಸ್ಪತ್ರೆಗೆ ಸಾಗಿಸಿದೆ.
ಮಗುವನ್ನು ಆಸ್ಪತ್ರೆಗೆ ಕರೆ ತಂದಾಗ, ಅದರ ಹೊಟ್ಟೆ ಹಾಗೂ ಹೊಟ್ಟೆಯ ಕೆಳ ಭಾಗದಲ್ಲಿ ತರಚು ಗಾಯಗಳಾಗಿದ್ದವು ಎಂದು ಆಸ್ಪತ್ರೆಯ ವೈದ್ಯ ಡಾ. ಅಲಮ್ ಶಾ ತಿಳಿಸಿದ್ದಾರೆ.
ನಾವು ಆ ಮಗುವಿಗೆ ಪ್ರಥಮ ಚಿಕಿತ್ಸೆಯೊಂದಿಗೆ ನೋವು ನಿವಾರಕ ಚುಚ್ಚುಮದ್ದನ್ನೂ ನೀಡಿ, ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಪೋಷಕರಿಗೆ ಸೂಚಿಸಿದೆವು ಎಂದು ಅವರು ಹೇಳಿದ್ದಾರೆ.
ಆದರೆ, ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಉಂಟಾಗಿದ್ದ ಭಾರಿ ಸಂಚಾರ ದಟ್ಟಣೆಯಿಂದಾಗಿ, ಮಗು ಆ ಹೆದ್ದಾರಿಯಲ್ಲೇ ಮೃತಪಟ್ಟಿದೆ. ಇದರ ಬೆನ್ನಿಗೇ, ಈ ಘಟನೆಗೆ ಹೆದ್ದಾರಿಯ ಅಸಮರ್ಪಕ ನಿರ್ವಹಣೆ ಕಾರಣ ಎಂದು ಸ್ಥಳೀಯ ಹೋರಾಟಗಾರರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ದೂಷಿಸಿದ್ದಾರೆ. ಸಂಚಾರ ದಟ್ಟಣೆಯನ್ನು ಸರಾಗಗೊಳಿಸಲು ಹೆದ್ದಾರಿಯ ವೈಟ್ ಟಾಪಿಂಗ್ ಗಾಗಿ 600 ಕೋಟಿ ರೂ. ವೆಚ್ಚ ಮಾಡಿದ್ದರೂ, ಸಂಚಾರ ದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಫಲವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜುಲೈ 31ರಂದೂ ಕೂಡಾ ಮರ ಮುರಿದು ಬಿದ್ದ ಘಟನೆಯಲ್ಲಿ 49 ವರ್ಷದ ಸಫಾಲೆ ನಿವಾಸಿ ಕೂಡಾ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48ರ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡು ಅವರೂ ಕೂಡಾ ಸಕಾಲ ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದರು.
ಈ ಕುರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸಂಪರ್ಕಿಸಿದಾಗ, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48ರತ್ತ ಸಾಗುವ ಘೋಡ್ ಬಂದರ್ ರಸ್ತೆಯ ಸಂಚಾರ ದಟ್ಟಣೆ ವಿರುದ್ಧ ಮಾರ್ಗದಲ್ಲಿ ಸಾಗುವುದರ ವ್ಯತಿರಿಕ್ತ ಪರಿಣಾಮದಿಂದಾಗಿ ಈ ಸಮಸ್ಯೆ ತಲೆದೋರಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.







