ಕಳೆದ 10 ವರ್ಷಗಳಲ್ಲಿ ಬ್ಯಾಂಕುಗಳು ರೈಟ್ಆಫ್ ಮಾಡಿರುವ ಕೆಟ್ಟ ಸಾಲಗಳ ಮೊತ್ತ 16.35 ಲಕ್ಷ ಕೋಟಿ ರೂ.

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಕಳೆದ 10 ವಿತ್ತವರ್ಷಗಳಲ್ಲಿ ಬ್ಯಾಂಕುಗಳು ಸುಮಾರು 16.35 ಲಕ್ಷ ಕೋಟಿ ರೂ.ಗಳ ಕೆಟ್ಟ ಸಾಲಗಳು ಅಥವಾ ಅನುತ್ಪಾದಕ ಆಸ್ತಿ(ಎನ್ಪಿಎ)ಗಳನ್ನು ರೈಟ್ಆಫ್ ಮಾಡಿವೆ ಅಥವಾ ತಮ್ಮ ಲೆಕ್ಕಪುಸ್ತಕಗಳಿಂದ ತೊಡೆದು ಹಾಕಿವೆ ಎಂದು ಸರಕಾರವು ಸಂಸತ್ತಿನಲ್ಲಿ ತಿಳಿಸಿದೆ.
2018-19ನೇ ವಿತ್ತವರ್ಷದಲ್ಲಿ 2,36,265 ಕೋಟಿ ರೂ. ಗಳ ಅತ್ಯಂತ ಹೆಚ್ಚಿನ ಕೆಟ್ಟ ಸಾಲಗಳನ್ನು ರೈಟ್ಆಫ್ ಮಾಡಿದ್ದರೆ, 2014-15ರ ವಿತ್ತವರ್ಷದಲ್ಲಿ 58,786 ಕೋಟಿ ರೂ.ಗಳ ಕನಿಷ್ಠ ಎನ್ಪಿಎಗಳನ್ನು ರೈಟ್ಆಫ್ ಮಾಡಲಾಗಿತ್ತು.
2023-24ನೇ ವಿತ್ತವರ್ಷದಲ್ಲಿ 1,70,270 ಕೋಟಿ ರೂ.ಗಳ ಮತ್ತು 2022-13ರಲ್ಲಿ 2,16,324 ಕೋಟಿ ರೂ.ಗಳ ಕೆಟ್ಟ ಸಾಲಗಳನ್ನು ಲೆಕ್ಕಪುಸ್ತಕಗಳಿಂದ ತೊಡೆದುಹಾಕಲಾಗಿತ್ತು.
ಸೋಮವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು, ಆರ್ಬಿಐ ಮಾರ್ಗಸೂಚಿಗಳು ಮತ್ತು ಬ್ಯಾಂಕ್ಗಳ ಆಡಳಿತ ಮಂಡಳಿಗಳು ಅನುಮೋದಿಸಿರುವ ನೀತಿಯ ಪ್ರಕಾರ ನಾಲ್ಕು ವರ್ಷಗಳು ಪೂರ್ಣಗೊಂಡ ಬಳಿಕ ಎನ್ಪಿಎಗಳನ್ನು ಬ್ಯಾಂಕ್ಗಳು ರೈಟ್ಆಫ್ ಮಾಡುತ್ತವೆ ಎಂದು ತಿಳಿಸಿದರು.
ಈ ರೈಟ್ಆಫ್ಗಳಿಂದ ಸಾಲಗಳು ಮನ್ನಾ ಆಗುವುದಿಲ್ಲ,ಸಾಲಗಳನ್ನು ಮರುವಸೂಲು ಮಾಡುವ ಅಧಿಕಾರವನ್ನು ಬ್ಯಾಂಕುಗಳು ಹೊಂದಿರುತ್ತವೆ ಮತ್ತು ಅದಕ್ಕಾಗಿ ಸಿವಿಲ್ ನ್ಯಾಯಾಲಯಗಳಲ್ಲಿ ಮತ್ತು ಸಾಲ ವಸೂಲಾತಿ ನ್ಯಾಯಮಂಡಳಿಗಳಲ್ಲಿ ಮೊಕದ್ದಮೆ ದಾಖಲು, ಎಸ್ಆರ್ಎಫ್ಎಇಎಸ್ಐಎ ಅಡಿ ಕ್ರಮಗಳು,ದಿವಾಳಿ ಕಾಯ್ದೆಯಡಿ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯಲ್ಲಿ ಪ್ರಕರಣಗಳ ದಾಖಲು ಸೇರಿದಂತೆ ವಿವಿಧ ಕಾರ್ಯವಿಧಾನಗಳ ಮೂಲಕ ಪ್ರಯತ್ನಗಳು ಜಾರಿಯಲ್ಲಿರುತ್ತವೆ. ಹೀಗಾಗಿ ಇದರಿಂದ ಸಾಲಗಾರರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅವರು ತಿಳಿಸಿದರು.
ಆರ್ಬಿಐ ದತ್ತಾಂಶಗಳ ಪ್ರಕಾರ 2024, ಡಿ.31ಕ್ಕೆ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು ಎನ್ಪಿಎ ಎಂದು ವರ್ಗೀಕರಿಸಲಾಗಿರುವ 29 ವಿಶಿಷ್ಟ ಸಾಲಗಾರ ಕಂಪನಿಗಳನ್ನು ಹೊಂದಿದ್ದು,ಅವು ತಲಾ 1,000 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಸಾಲಗಳನ್ನು ಬಾಕಿಯಿರಿಸಿವೆ. ಈ ಖಾತೆಗಳಲ್ಲಿ ಒಟ್ಟು ಬಾಕಿ 61,027 ಕೋಟಿ ರೂ.ಇತ್ತು ಎಂದು ಸೀತಾರಾಮನ್ ತಿಳಿಸಿದರು.
ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರದಲ್ಲಿ ಅವರು,ಸರಕಾರವು 8ನೇ ಕೇಂದ್ರ ವೇತನ ಆಯೋಗವನ್ನು ರಚಿಸಲು ನಿರ್ಧರಿಸಿದೆ ಎಂದು ತಿಳಿಸಿದರು.







